ಹೈದರಾಬಾದ್: ಇತ್ತೀಚಿನ ವರ್ಷಗಳವರೆಗೆ ಹೆಚ್ಚಿನ ಜನರು ಖಚಿತವಾದ ಆದಾಯವನ್ನು ಪಡೆಯಲು ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ಅಲ್ಪಾವಧಿಯಲ್ಲಿಯೇ ಹಲವಾರು ಪರ್ಯಾಯ ಹೂಡಿಕೆ ಯೋಜನೆಗಳು ನಮ್ಮ ಮುಂದೆ ಬಂದಿದ್ದರಿಂದ ಪರಿಸ್ಥಿತಿಯು ಗಮನಾರ್ಹವಾಗಿ ಬದಲಾಗಿದೆ. ವಿಶೇಷವಾಗಿ, ಫಿನ್‌ಟೆಕ್ ಸಂಸ್ಥೆಗಳ ಆಗಮನವು ಸಾಮಾನ್ಯ ಠೇವಣಿದಾರರ ಹೂಡಿಕೆಗಳ ವಿಧಾನವನ್ನು ಸಂಪೂರ್ಣವಾಗಿ ಮಾರ್ಪಡಿಸಿದೆ. ಹೆಚ್ಚಿನ ಬಡ್ಡಿದರಗಳನ್ನು ನೀಡುವ ಹೊಸ ಯೋಜನೆಗಳನ್ನು ನೀಡುವ ಮೂಲಕ ಫಿನ್‌ಟೆಕ್ ಕಂಪನಿಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.
ಸ್ಥಿರ ಠೇವಣಿಗಳಿಗೆ ಸುರಕ್ಷಿತ ಪರ್ಯಾಯ: ಸಾಮಾನ್ಯವಾಗಿ ಹೂಡಿಕೆದಾರರು ತಮ್ಮ ಹೂಡಿಕೆಗೆ ಭದ್ರತೆ ಮತ್ತು ಖಚಿತವಾದ ಲಾಭ ಬಯಸುತ್ತಾರೆ. ಇದಕ್ಕಾಗಿಯೇ ಹಲವರು ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಠೇವಣಿಗಳಂಥ ಸುರಕ್ಷಿತ ಹೂಡಿಕೆ ಯೋಜನೆಗಳನ್ನು ಬಯಸುತ್ತಾರೆ. ಹಣಕಾಸಿನ ವಿಷಯಗಳ ಬಗ್ಗೆ ಹೊಸ ಅರಿವಿನ ನಂತರ, ಕೆಲವರು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಮತ್ತು ಹೊಸ ಯೋಜನೆಗಳ ಕಡೆಗೆ ತಿರುಗುತ್ತಿದ್ದಾರೆ.
ಆದರೂ ಇವರಲ್ಲಿ ಬಹುತೇಕರು ಈಗಲೂ ಸ್ಥಿರ ಠೇವಣಿಗಳ ಮೇಲೆ ಅವಲಂಬಿತರಾಗಿದ್ದಾರೆ. ಫಿನ್‌ಟೆಕ್ ಕಂಪನಿಗಳು ಸಾಂಪ್ರದಾಯಿಕ ಸ್ಥಿರ ಠೇವಣಿಗಳಿಗೆ ಸುರಕ್ಷಿತ ಪರ್ಯಾಯಗಳನ್ನು ನೀಡುವ ಮೂಲಕ ಹೊಸ ಮಾದರಿಯ ಹೂಡಿಕೆಯ ಪ್ರವೃತ್ತಿಯನ್ನು ಬೆಳೆಸುತ್ತಿವೆ.
ಅಸಲು ಕೂಡ ನಿಮಗೆ ಗಿಟ್ಟದ ಪರಿಸ್ಥಿತಿ ಬಂದೀತು : ಆರ್‌ಬಿಐ - ಅನುಮೋದಿತ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಎಫ್‌ಡಿಗಳಿಗೆ ಸ್ಪರ್ಧಾತ್ಮಕ ಪರ್ಯಾಯಗಳನ್ನು ನೀಡುವಲ್ಲಿ ಮುನ್ನಡೆ ಸಾಧಿಸುತ್ತಿವೆ. ಈ ಎಲ್ಲ ಎನ್‌ಬಿಎಫ್‌ಸಿಗಳು ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುವ ಉತ್ಸಾಹವನ್ನು ಹೊಂದಿರುವ ಹೊಸ-ಯುಗದ ಸಂಸ್ಥೆಗಳಾಗಿವೆ.
ಉದಾಹರಣೆಗೆ, ಕೆಲವು ಸಂಸ್ಥೆಗಳು 14-15 ಪ್ರತಿಶತ ಬಡ್ಡಿಯಲ್ಲಿ ಗೃಹ ಮತ್ತು ಕಾರು ಸಾಲಗಳನ್ನು ನೀಡುತ್ತಿವೆ. ಅದೇ ಸಮಯದಲ್ಲಿ, ಇವು ತಮ್ಮ ಠೇವಣಿದಾರರಿಗೆ ಶೇಕಡಾ 12 ರಿಂದ 13ರಷ್ಟು ಬಡ್ಡಿಯ ಭರವಸೆ ನೀಡುತ್ತಿವೆ. ಇದು ಅಪ್ರಾಯೋಗಿಕ ಮತ್ತು ಕಾರ್ಯಸಾಧ್ಯವಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಇಂಥ ಸಂಸ್ಥೆಗಳಲ್ಲಿ, ನಿಮ್ಮ ಠೇವಣಿಗಳಿಗೆ ಹೆಚ್ಚಿನ ಅಪಾಯವಿರುತ್ತದೆ.
ಈ ಎನ್‌ಬಿಎಫ್‌ಸಿಗಳು ತಾವು ನೀಡಿದ ಸಾಲಗಳನ್ನು ಮರುಪಡೆಯಲು ಸಾಧ್ಯವಾಗದಿದ್ದರೆ ನೀವು ನಿಮ್ಮ ಅಸಲು ಮೊತ್ತವನ್ನು ಕಳೆದುಕೊಳ್ಳಬಹುದು. ಹೆಚ್ಚಿನ ಬಡ್ಡಿ ಹೋಗಲಿ, ಅಸಲು ಕೂಡ ನಿಮಗೆ ಗಿಟ್ಟದ ಪರಿಸ್ಥಿತಿ ಬಂದೀತು ಜೋಕೆ.
ಎನ್ಬಿಎಫ್ಸಿಗಳ ಕಾರ್ಯವೈಖರಿ ವಿಭಿನ್ನ: ಈ ಎನ್‌ಬಿಎಫ್‌ಸಿಗಳು ಠೇವಣಿದಾರರು ಮತ್ತು ಸಾಲ ಪಡೆಯುವವರ ನಡುವೆ ಮಧ್ಯವರ್ತಿ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸಂಸ್ಥೆಯನ್ನು ಮುಚ್ಚಿದರೆ, ನಾವು ನಮ್ಮ ಹಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೇವೆ. ಆಗ ಯಾರು ಸಾಲ ಪಡೆದಿದ್ದಾರೆ, ಈಗಾಗಲೇ ಎಷ್ಟು ವಸೂಲಿಯಾಗಿದೆ ಮತ್ತು ಬಡ್ಡಿ ಏನಾಯಿತು ಎಂಬ ವಿವರಗಳನ್ನು ನೀಡಲು ಯಾರಿಗೂ ಸಾಧ್ಯವಾಗುವುದಿಲ್ಲ.
ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ತೆರೆಯುವ ಬಗ್ಗೆ ನಿಮಗೆ ಹೆಚ್ಚು ತಿಳಿದಿರಬೇಕಾಗಿಲ್ಲ. ನೀವು ಖಾತೆ ಹೊಂದಿರುವ ನಿಮ್ಮ ಸ್ವಂತ ಬ್ಯಾಂಕ್‌ಗೆ ಹೋದರೆ, ಅಲ್ಲಿನ ಸಿಬ್ಬಂದಿ ನಿಮ್ಮ ಹೆಸರಿನಲ್ಲಿ ಎಫ್‌ಡಿ ತೆರೆಯಲು ಸಹಾಯ ಮಾಡುತ್ತಾರೆ. ಇದು ಎನ್ಬಿಎಫ್ಸಿಗಳ ಕಾರ್ಯವೈಖರಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ. ಈಗ ಠೇವಣಿಗಳು ತಂತ್ರಜ್ಞಾನದಿಂದ ಚಾಲಿತವಾಗಿವೆ. ಸಾಲ ಪಡೆಯುವವರು ಮತ್ತು ಫಿನ್‌ಟೆಕ್ ಸಂಸ್ಥೆಯ ನಡುವೆ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಈ ಸಂಕೀರ್ಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟ.
ಕಾನೂನು ಹೋರಾಟ ಕಷ್ಟ: ನಮ್ಮ ಹೂಡಿಕೆಗೆ ಕಾನೂನು ರಕ್ಷಣೆ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಕೆಲವೇ ಸಂದರ್ಭಗಳಲ್ಲಿ ಎನ್‌ಬಿಎಫ್‌ಸಿಗಳು ನಾವು ಮಾಡಿದ ಹೂಡಿಕೆಗೆ ಪ್ರಮಾಣಪತ್ರಗಳನ್ನು ನೀಡುತ್ತವೆ. ಇನ್ನು ಕೆಲ ಕಂಪನಿಗಳು ನಿಮ್ಮ ಎಲ್ಲ ಹೂಡಿಕೆಗಳಿಗೆ ಒಪ್ಪಂದಗಳೇ ಆಧಾರವಾಗಿವೆ ಎಂದು ಸ್ಪಷ್ಟವಾಗಿ ಹೇಳುತ್ತವೆ. ಅಂತಹ ಸಂದರ್ಭಗಳಲ್ಲಿ ಬೇಕಾದಾಗ ನಿಮ್ಮ ಹಣವನ್ನು ಮರಳಿ ಪಡೆಯಲು ಕಾನೂನು ಹೋರಾಟ ಮಾಡುವುದು ಕಷ್ಟವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ. ಪರಿಣಾಮವಾಗಿ, ಅನೇಕ ಜನರು ತಮ್ಮ ಹೂಡಿಕೆಗಳನ್ನು ಈ ಕಂಪನಿಗಳಿಗೆ ಹಾಕುತ್ತಿದ್ದಾರೆ. ಹೆಚ್ಚು ಲಾಭ ಅಂದರೆ ಅತಿ ಹೆಚ್ಚು ಅಪಾಯ ಎಂಬುದನ್ನು ಇಂಥವರು ಮರೆಯುತ್ತಾರೆ. ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ರಿಸ್ಕ್ಗೆ ಒಡ್ಡಲು ಸಿದ್ಧರಾಗಿದ್ದರೆ ಮಾತ್ರ ನೀವು ಅತಿ ಹೆಚ್ಚಿನ ಬಡ್ಡಿಯ ಯೋಜನೆಗಳನ್ನು ಹುಡುಕಬೇಕು.
ಇದನ್ನೂ ಓದಿ: ದೀರ್ಘಾವಧಿ ಠೇವಣಿ ಉತ್ತಮವೇ? ಇಲ್ಲಾ ಅಲ್ಪಾವಧಿ ಎಫ್ಡಿನೇ ಬೆಸ್ಟಾ? ಇಲ್ಲಿದೆ ಕೆಲ ಸಲಹೆ!