ಇಸ್ಲಾಮಾಬಾದ್: ಭಾರತದೊಂದಿಗಿನ ವಾಣಿಜ್ಯ-ವ್ಯಾಪಾರಗಳನ್ನು ರದ್ದುಗೊಳಿಸಿ ವರ್ಷಗಳು ಉರುಳುತ್ತಿದ್ದು ಪಾಕಿಸ್ತಾನದಲ್ಲಿ ಒಂದೊಂದೇ ಸಂಕಷ್ಟಗಳು ಗೋಚರವಾಗುತ್ತಿವೆ.
ಈರುಳ್ಳಿ, ಟೊಮೆಟೋ ಖರೀದಿಸುವುದಕ್ಕೂ ಕಣ್ಣೀರಿಡುತ್ತಿದ್ದ ಪಾಕಿಸ್ತಾನೀಯರು ಈಗ ಗೋಧಿ ಹಿಟ್ಟಿಗಾಗಿ ಪರಿತಪಿಸುತ್ತಿದ್ದಾರೆ. ಸ್ಥಳೀಯ ಗೋಧಿಯ ಬೆಲೆ ದೇಶದ ಇತಿಹಾಸದಲ್ಲಿ ಇದೇ ಮೊದಲು 40 ಕೆ.ಜಿ.ಗೆ 2,400 ರೂ. ತಲುಪಿದೆ.
ಕಳೆದ ಡಿಸೆಂಬರ್‌ನಲ್ಲಿ 40 ಕೆ.ಜಿ. ಗೋಧಿಯನ್ನು 2,000 ರೂ.ಗೆ ಮಾರಾಟ ಮಾಡಿದಾಗ ದೇಶವು ತೀವ್ರ ಪರಿಸ್ಥಿತಿಯನ್ನು ಎದುರಿಸಿತ್ತು. ಈಗ ಡಿಸೆಂಬರ್ ಆಗಮನದ ಮೊದಲೇ ಅಕ್ಟೋಬರ್ 5ರಂದು ದೇಶದ ಗೋಧಿಯ ಬೆಲೆ ಏರಿಕೆ ಕಂಡಿದೆ.
ಸಿಂಧ್‌ನಲ್ಲಿ ಗೋಧಿ ಕೊಯ್ಲು ಪ್ರಾರಂಭ ಆಗಿದೆ. ನವೆಂಬರ್‌ನಲ್ಲಿ ಪಂಜಾಬ್‌ನಲ್ಲಿ ಪ್ರಾರಂಭ ಆಗಲಿರುವುದರಿಂದ ಗೋಧಿಯ ಅಧಿಕೃತ ಖರೀದಿ ಬೆಲೆಯನ್ನು ತಕ್ಷಣ ಘೋಷಿಸುವಂತೆ ಪಾಕಿಸ್ತಾನ ಸರ್ಕಾರ ಎಲ್ಲಾ ಹಿಟ್ಟು ಸಂಘ ಒಕ್ಕೂಟಗಳು ಮತ್ತು ಪ್ರಾಂತೀಯ ಸರ್ಕಾರಗಳನ್ನು ಒತ್ತಾಯಿಸಿದೆ.
ಹಣದುಬ್ಬರದ ಪರಿಣಾಮ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗೋಧಿ ಮತ್ತು ಹಿಟ್ಟಿನ ಬಿಕ್ಕಟ್ಟು ಎದುರಾಗಿದೆ. ಕೊರೊನಾ ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪಾಕ್ಗೆ ಈಗಿನ ದುಸ್ಥಿತಿ ಆ ದೇಶದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಭವಿಷ್ಯದ ದಿನಗಳ ಕರಾಳತೆಯನ್ನು ಇದು ಸೂಚಿಸುತ್ತಿದೆ.