ನವದೆಹಲಿ: ಭಾರತದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳು ರೈತರ ಆದಾಯವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಆದರೆ, ದುರ್ಬಲ ವರ್ಗದ ಕೃಷಿಕರಿಗೆ ಸಾಮಾಜಿಕ ಸುರಕ್ಷತಾ ಜಾಲ ಒದಗಿಸುವ ಅವಶ್ಯಕತೆಯಿದೆ ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಗೀತಾ ಗೋಪಿನಾಥ್ ಹೇಳಿದ್ದಾರೆ.
ಭಾರತದಲ್ಲಿ ಮೂಲಸೌಕರ್ಯ ಸೇರಿದಂತೆ ಹಲವು ಸುಧಾರಣೆಗಳು ಅಗತ್ಯವಿರುವ ಅನೇಕ ಕ್ಷೇತ್ರಗಳಿವೆ ಎಂದು ವಾಷಿಂಗ್ಟನ್ ಮೂಲದ ಜಾಗತಿಕ ಹಣಕಾಸು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಪ್ರತಿಪಾದಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಭಾರತ ಸರ್ಕಾರವು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದು ಅಂದಾಜಿಸಿದೆ. ಅದು ಮಧ್ಯವರ್ತಿಗಳನ್ನು ತೆಗೆದುಹಾಕುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದಿತ್ತು.
ಹೊಸ ಕೃಷಿ ಕಾನೂನುಗಳ ಪ್ರಶ್ನೆಗೆ ಉತ್ತರಿಸಿದ ಗೋಪಿನಾಥ್, ಈ ನಿರ್ದಿಷ್ಟ ಕೃಷಿ ಕಾನೂನುಗಳು ಮಾರುಕಟ್ಟೆ ಕ್ಷೇತ್ರದಲ್ಲಿದ್ದವು. ಇದು ರೈತರಿಗೆ ಮಾರುಕಟ್ಟೆಯನ್ನು ವಿಸ್ತರಿಸಲಿದ್ದು, ತೆರಿಗೆ ಪಾವತಿಸದೆ ಮಂಡಿಗಳಲ್ಲದೆ ಅನೇಕ ಮಳಿಗೆಗಳಿಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದು ನಮ್ಮ ದೃಷ್ಟಿಯಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಇದನ್ನೂ ಓದಿ: ಕೇಂದ್ರ ಬಜೆಟ್: 'ಸಾಲ ನೀಡುವಂತೆ ಬ್ಯಾಂಕ್ಗಳನ್ನು ಕೇಳಬೇಡಿ'- ನಿರ್ಮಲಾಗೆ ಬ್ಯಾಂಕರ್ ಮನವಿ
ಪ್ರತಿ ಬಾರಿಯೂ ಸುಧಾರಣೆ ಜಾರಿಗೆ ತಂದಾಗ ಪರಿವರ್ತನೆಯ ವೆಚ್ಚಗಳು ಕಂಡುಬರುತ್ತವೆ. ಸಾಮಾಜಿಕ ಸುರಕ್ಷತಾ ಜಾಲ ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಇದರಿಂದ ದುರ್ಬಲ ರೈತರಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಇದೇ ಈಗ ಚರ್ಚೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆ ಸಮಸ್ಯೆಗಳಿಂದ ಹೊರಬಂದರೆ ಏನಾಗುತ್ತದೆ ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಭಾರತದಲ್ಲಿ ಸಾವಿರಾರು ರೈತರು ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಿಂದ ಬಂದು ಕಳೆದ ಎರಡು ತಿಂಗಳಿಂದ ದೆಹಲಿ ಗಡಿ ವ್ಯಾಪ್ತಿಯಲ್ಲಿ ಬೀಡುಬಿಟ್ಟು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.