ನವದೆಹಲಿ: ಕೋವಿಡ್-19ರ ನಂತರ ಭಾರತದ ಆರ್ಥಿಕತೆಯು ಭಾರಿ ಹಿನ್ನಡೆ ಎದುರಿಸಲಿದೆ. ಆರ್ಥಿಕತೆಯ ನಿರ್ಣಾಯಕ ಕ್ಷೇತ್ರಗಳ ಸುರಕ್ಷತಾ ಬಗ್ಗೆಯೂ ಯೋಚಿಸುವ ಅವಶ್ಯಕತೆಯಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಸಿಗರ ರಕ್ಷಣೆ, ಆಹಾರ ಭದ್ರತೆ, ಬಡವರಿಗೆ ಆರ್ಥಿಕ ನೆರವು ನೀಡಲು ನ್ಯಾಯ್ ಯೋಜನೆ ಜಾರಿಗೆ ತರುವ ಕುರಿತು ಕೇಂದ್ರವು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದು ಸಲಹೆ ನೀಡಿರು.
ಆಹಾರ ಪೂರೈಕೆ ನಿರ್ಣಾಯಕ ವಿಷಯವಾಗಿದೆ. ನಾವು ಬಡವರಿಗೆ ಪಡಿತರ ಆಹಾರ ವಿತರಿಸಬೇಕು. ಬಡವರಿಗೆ 10 ಕೆ.ಜಿ. ಗೋಧಿ ಮತ್ತು ಅಕ್ಕಿ, ಒಂದು ಕೆ.ಜಿ. ಸಕ್ಕರೆ, ಒಂದು ಕೆ.ಜಿ. ದ್ವಿದಳ ಧಾನ್ಯಗಳನ್ನು ಪ್ರತಿ ವಾರ ನೀಡಬೇಕು ಎಂದು ಹೇಳಿದರು.
ಎಂಎಸ್‌ಎಂಇಗಳಿಗಾಗಿ ರಕ್ಷಣಾತ್ಮಕ ಪ್ಯಾಕೇಜ್ ರಚಿಸಲು ಮತ್ತು ದೊಡ್ಡ ಕಾರ್ಯತಂತ್ರದ ಕಂಪನಿಗಳನ್ನು ಉಳಿವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದರು.
ಲಾಕ್‌ಡೌನ್ ಸಾಂಕ್ರಾಮಿಕ ರೋಗಕ್ಕೆ ಪರಿಹಾರವಲ್ಲ. ಅಸ್ತಿತ್ವದಲ್ಲಿರುವ ವೈದ್ಯಕೀಯ ಸೌಕರ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಈ ಸಮಯ ಬಳಸಿಕೊಳ್ಳಬೇಕು. ಆತಂಕಕಾರಿಯಾದ ಆರ್ಥಿಕ ಕುಸಿತ ಎದುರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಇಡೀ ದೇಶ ಈ ಬಿಕ್ಕಟ್ಟನ್ನು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಅದನ್ನು ಸೂಕ್ಷ್ಮ ರೀತಿಯಲ್ಲಿ ಎದುರಿಸಲು ರಾಜ್ಯಗಳಿಗೆ ನೆರವಾಗಲು ಸಾಕಷ್ಟು ಸಂಪನ್ಮೂಲಗಳನ್ನು ನೀಡುವ ಅವಶ್ಯಕತೆಯಿದೆ ಎಂದರು.