ಬೆಂಗಳೂರು: ಚೀನಾದ ಮೊಬೈಲ್ ಕಂಪನಿ ಶಿಯೋಮಿ ಭಾರತದ ಉಪಗ್ರಹ ಆಧಾರಿತ ನ್ಯಾವಿಗೇಷನ್ ತಂತ್ರಜ್ಞಾನದಲ್ಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ಗೆ (ಜಿಪಿಎಸ್) ಪರ್ಯಾಯ ಕಂಡು ಹಿಡಿದಿದೆ. ಮುಂಬರುವ ರೆಡ್ಮಿ ಫೋನ್‌ಗಳಲ್ಲಿ ನಾವಿಕ್ ಅನ್ನು ಅಳವಡಿಸಿಕೊಳ್ಳಲು ಶಿಯೋಮಿ ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಶಿಯೋಮಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ತಿಳಿಸಿದ್ದಾರೆ.
ದೇಸಿ ಜಿಪಿಎಸ್ ವ್ಯವಸ್ಥೆ ಸಂಬಂಧಿಸಿದಂತೆ ಇಸ್ರೋ ರೂಪಿಸಿರುವ ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (ನಾವಿಕ್) ಶೀಘ್ರದಲ್ಲೇ ಶಿವೋಮಿ ರೆಡ್ಮಿ ಮೊಬೈಲ್ಗಳಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ಅತಿಹೆಚ್ಚು ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡುವುದು ಶಿವೋಮಿ ಆಗಿದ್ದು, ನಾವಿಕ್ ಜಿಪಿಎಸ್ ಅಳವಡಿಕೆ ಮೂಲಕ ಇಸ್ರೋ ಕನಸು ನನಸಾಗಲಿದೆ.
ಮುಂಬರುವ ದಿನಗಳಲ್ಲಿ ರೆಡ್ಮಿ ಬಿಡುಗಡೆ ಮಾಡಲಿರುವ ಮೊಬೈಲ್ಗಳಲ್ಲಿ ಜಿಪಿಎಸ್ ಬದಲಿಗೆ ನಾವಿಕ್ ಇರಲಿದೆ. ನಾವಿಕ್ ಅಳವಡಿಸಿ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುತ್ತಿರುವ ಮೊದಲ ಮೊಬೈಲ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
2020ರಲ್ಲಿ ರೆಡ್ಮಿ ಬಿಡುಗಡೆ ಮಾಡುತ್ತಿರುವ ವಿವಿಧ ಮಾದರಿಯ ಫೋನ್‌ಗಳು ನಾವಿಕ್ ಸಪೋರ್ಟ್ ಮಾಡಲಿವೆ. ಆರಂಭದಲ್ಲಿ ಸ್ನ್ಯಾಪ್‌ಡ್ರ್ಯಾಗನ್ ಚಿಪ್‌ಸೆಟ್‌ಗಳು ಅಳವಡಿಕೆಯಾಗಿರುವ ಫೋನ್‌ಗಳಲ್ಲಿ ನಾವಿಕ್ ಲಭ್ಯವಿರಲಿದೆ. ಇಸ್ರೋ ಜೊತೆಗೆ ರೆಡ್ಮಿ ಕಂಪನಿ ಈ ಸಂಬಂಧ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.