ಮುಂಬೈ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಮುಖ್ಯಸ್ಥರ (ಸಿಎಂಡಿ) ಪೂರ್ವ ಲಿಖಿತ ಬರವಣಿಗೆಯ ದೃಢೀಕರಣವಿಲ್ಲದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಕುರಿತು ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಏರ್ ಇಂಡಿಯಾ ಯೂನಿಯನ್ನ ಕೆಲವು ಪ್ರತಿನಿಧಿಗಳು ಈಚೆಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಯಿಂದ ಸಂಸ್ಥೆಯ ಹೆಸರಿಗೆ ಕಪ್ಪು ಚುಕ್ಕೆ ಬರಬಹುದೆಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕಳೆದ ಏಪ್ರಿಲ್ 30ರಂದು ಈ ಸಂಬಂಧ ಸಿಬ್ಬಂದಿಗೆ ಎಚ್ಚರಿಸಿರುವ ಸಂಸ್ಥೆ, ಏರ್ ಇಂಡಿಯಾ ಸಮವಸ್ತ್ರ ಧರಿಸಿ ಸಿಬ್ಬಂದಿ ವಿಡಿಯೋ ಹಂಚಿಕೊಂಡ ಅಥವಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉದಾಹರಣೆಗಳಿವೆ. ಇಂತಹ ವಿಡಿಯೋ, ಫೋಟೋ ಮತ್ತು ಸುದ್ದಿಗಳ ಮುದ್ರಣ, ಎಲೆಕ್ಟ್ರಾನಿಕ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸ್ಪಷ್ಟನೆ ನೀಡಿದೆ.
ಸಂಸ್ಥೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಯಾವುದೇ ಸಿಬ್ಬಂದಿ ವೈಯಕ್ತಿಕವಾಗಿ ಅಥವಾ ಗುಂಪಿನ ಅಥವಾ ಸಂಸ್ಥೆಯ ಒಕ್ಕೂಟದ ಪರವಾಗಿ ನೀಡುವಂತಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕಂಪನಿಯ ನಿಯಮಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಿದೆ.