ಮುಂಬೈ: ಡಾಲರ್ ಎದುರು ರೂಪಾಯಿ ಮೌಲ್ಯ ವೃದ್ಧಿ ಹಾಗೂ ವಿದೇಶಿ ಬಂಡವಾಳ ಹೂಡಿಕೆಯ ಪರಿಣಾಮವಾಗಿ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ದಿನದಾಂತ್ಯಕ್ಕೆ 367 ಅಂಕಗಳ ಏರಿಕೆಯೊಂದಿಗೆ 60 ಸಾವಿರದ ಗಡಿ ದಾಟಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 120 ಅಂಕಗಳ ಜಿಗಿತ ಕಂಡು 17,925ಕ್ಕೆ ತಲುಪಿದೆ. ಸೆನ್ಸೆಕ್ಸ್ 60,223ರಲ್ಲಿ ವಹಿವಾಟು ಮುಗಿಸಿದೆ.
ಬಜಾಜ್ ಫೈನಾನ್ಸ್ ಸರ್ವೀಸ್ ಷೇರುಗಳು ಶೇ.5.09 ರಷ್ಟು ಏರಿಕೆಯೊಂದಿಗೆ ಲಾಭ ಗಳಿಸಿದ ಕಂಪನಿಗಳ ಪೈಕಿ ಅಗ್ರಸ್ಥಾನ ಪಡೆಯಿತು. ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ಮಾರುತಿ ಹಾಗೂ ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನ ಪಡೆದವು. ಮತ್ತೊಂದೆಡೆ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಹೆಚ್‌ಸಿಎಲ್ ಟೆಕ್, ವಿಪ್ರೋ, ಪವರ್‌ಗ್ರಿಡ್ ಹಾಗೂ ಡಾ.ರೆಡ್ಡೀಸ್ ಷೇರುಗಳು ನಷ್ಟ ಅನುಭವಿಸಿದವು.
ಕೋವಿಡ್ ರೂಪಾಂತರಿ ಒಮಿಕ್ರಾನ್ ತಡೆಯಲು ದೇಶದಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳ ಹೊರತಾಗಿಯೂ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ನಿರಂತರವಾಗಿ ಏರಿಕೆಯಾಗುತ್ತಿರುವುದು ಗಮನಾರ್ಹ.
ಯುಎಸ್ ಫೆಡ್ ಸಭೆಯು ಬಡ್ಡಿದರದ ತನ್ನ ನಿರ್ಧಾರವನ್ನು ಪ್ರಕಟಿಸುವ ಮುನ್ನ ಅಮೆರಿಕ ಹಾಗೂ ಏಷ್ಯನ್ ಮಾರುಕಟ್ಟೆಗಳು ದುರ್ಬಲ ವಹಿವಾಟು ನಡೆಸಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಹಾಂಗ್ ಕಾಂಗ್ ಹಾಗೂ ಸಿಯೋಲ್ ಷೇರುಪೇಟೆಗಳು ನಷ್ಟದಲ್ಲಿ ಕೊನೆಗೊಂಡರೆ, ಟೋಕಿಯೋ ಮಾತ್ರ ಸಕಾರಾತ್ಮಕವಾದ ವಹಿವಾಟು ನಡೆಸಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿನ್ನೆ 1,273.86 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಮಾಹಿತಿ ನೀಡಿದೆ.
ಇಂದು ಡಾಲರ್ ಎದುರು ರೂಪಾಯಿ 20 ಪೈಸೆ ಏರಿಕೆ ಕಂಡು 74.38ಕ್ಕೆ ತಲುಪಿದೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಏರಿಕೆ: ಚಿನಿವಾರ ಪೇಟೆಯ ಇಂದಿನ ದರಪಟ್ಟಿ ಹೀಗಿದೆ..