ನವದೆಹಲಿ: ನೀತಿ ಆಯೋಗವು ಸೆಂಟ್ರಲ್ ಬ್ಯಾಂಕ್ ಹಾಗೂ ಇಂಡಿಯನ್ ಓವರ್ಸಿಸ್ ಬ್ಯಾಂಕ್ (ಐಒಬಿ) ಅನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿದೆ ಎಂಬ ಮಾಹಿತಿ ದೊರೆತಿದೆ.
ಬ್ಯಾಂಕ್ ಆಫ್ ಇಂಡಿಯಾದ ಹೆಸರೂ ಖಾಸಗೀಕರಣದ ಪಟ್ಟಿಯಲ್ಲಿದೆ ಎನ್ನಲಾಗುತ್ತಿದೆ. ಸರ್ಕಾರ ಈ ಬ್ಯಾಂಕುಗಳಲ್ಲಿನ ತನ್ನ ಷೇರುಗಳ ಪಾಲು ಮಾರಾಟ ಮಾಡುತ್ತದೆ ಅನ್ನೋದು ಖಾಸಗೀಕರಣದ ಅರ್ಥ. '2021-22ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.
ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‌ಯು) ಹೆಸರುಗಳನ್ನು ವಿಲೀನಗೊಳಿಸಲು ಅಥವಾ ಖಾಸಗೀಕರಣಗೊಳಿಸಲು ಅಥವಾ ಇತರ ಪಿಎಸ್ಯುಗಳ ಅಂಗಸಂಸ್ಥೆಗಳನ್ನಾಗಿ ಮಾಡಲು ನೀತಿ ಆಯೋಗವು ಶಿಫಾರಸು ಮಾಡಬೇಕಾಗುತ್ತದೆ. ಇದರ ಭಾಗವಾಗಿ, ನೀತಿ ಆಯೋಗ ಮೇಲಿನ ಎರಡು ಬ್ಯಾಂಕ್ಗಳನ್ನು ಖಾಸಗೀಕರಣಕ್ಕಾಗಿ ಶಿಫಾರಸು ಮಾಡಿದಂತೆ ತೋರುತ್ತದೆ. ಈ ಪ್ರಸ್ತಾಪಗಳನ್ನು ಹೂಡಿಕೆ ಇಲಾಖೆ, ಸಾರ್ವಜನಿಕ ಆಸ್ತಿ ನಿರ್ವಹಣೆ (ದೀಪಂ) ಮತ್ತು ಹಣಕಾಸು ಸೇವೆಗಳ ಇಲಾಖೆ ಪರಿಶೀಲಿಸಲಿದ್ದು, ಅಗತ್ಯ ಬದಲಾವಣೆಗಳನ್ನು ಕಾನೂನುಬದ್ಧವಾಗಿ ಮಾಡುತ್ತದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕ್ಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್
ಖಾಸಗೀಕರಣ ಪ್ರಕ್ರಿಯೆಯ ಅವಧಿಯು ಈ ಬದಲಾವಣೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ.
ಕೋವಿಡ್ನಿಂದಾಗಿ ಖಾಸಗೀಕರಣ ಪ್ರಕ್ರಿಯೆ ವಿಳಂಬ: ಫಿಚ್
ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆ ವಿಳಂಬವಾಗಲಿದೆ ಎಂದು ಫಿಚ್ ರೇಟಿಂಗ್ಸ್ ಅಂದಾಜಿಸಿದೆ. ಎರಡನೇ ಅಲೆಯ ಕೋವಿಡ್ ಬೆಳವಣಿಗೆಗಳಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದಿದೆ.