ಮುಂಬೈ : ದೇಶದಲ್ಲಿ ಒಮಿಕ್ರಾನ್ ಸೋಂಕಿನಿಂದ ಮಿನಿ ಲಾಕ್‌ಡೌನ್ ಸೇರಿ ಹಲವು ಕಠಿಣ ನಿರ್ಬಂಧಗಳ ನಡುವೆಯೂ ಮುಂಬೈ ಷೇರುಪೇಟೆಯಲ್ಲಿ ದಿನದಾಂತ್ಯಕ್ಕೆ ಸೆನ್ಸೆಕ್ಸ್ 673 ಅಂಕಗಳ ಏರಿಕೆಯಾಗಿ 59,855ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 179.55 ಅಂಕಗಳ ಜಿಗಿತದೊಂದಿಗೆ 17,805ಕ್ಕೆ ಬಂದು ನಿಂತಿದೆ.
ಎನ್‌ಟಿಪಿಸಿ, ಪವರ್‌ಗ್ರಿಡ್, ಎಸ್‌ಬಿಐ, ಟೈಟಾನ್, ರಿಲಯನ್ಸ್, ಬಜಾಜ್ ಫೈನಾನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್ ಷೇರುಗಳ ಮೌಲ್ಯ ಶೇ.5.48ರಷ್ಟು ಹೆಚ್ಚಿಸಿಕೊಂಡವು.
ಮತ್ತೊಂದೆಡೆ ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಇಂಡಸ್‌ಇಂಡ್ ಬ್ಯಾಂಕ್ ಹಾಗೂ ಡಾ. ರೆಡ್ಡೀಸ್ ಷೇರುಗಳು ನಷ್ಟ ಅನುಭವಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 575.39 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
2022 ವರ್ಷದ ಮೊದಲ ವಹಿವಾಟಿನ ದಿನದಂದು ಅಮೆರಿಕದ ಷೇರುಪೇಟೆ ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು. ಇದು ರಾಷ್ಟ್ರೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ ರೂಪಾಂತರಿ 3ನೇ ಅಲೆ ಇರುವುದು ಸ್ಪಷ್ಟವಾಗಿದೆ. ಹಿಂದಿನ ಇದೇ ಅವಧಿಗೆ ಹೋಲಿಸಿದರೆ ವೈರಸ್ ಮಾರುಕಟ್ಟೆಯ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.27ರಷ್ಟು ಏರಿಕೆಯಾಗಿ 79.19 ಡಾಲರ್‌ಗೆ ಮಾರಾಟವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 29 ಪೈಸೆ ಕುಸಿತ ಕಂಡು 74.57 ರೂಪಾಯಿಯಲ್ಲಿ ವಹಿವಾಟು ನಡೆಸಿದೆ.
ಇದನ್ನೂ ಓದಿ: ONGC ನೂತನ ಸಿಎಂಡಿ ಆಗಿ ಅಲ್ಕಾ ಮಿತ್ತಲ್ ನೇಮಕ..