ನವದೆಹಲಿ: ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕುವ ಗುರಿಯನ್ನು ಭಾರತ ಹೊಂದಿದೆ ಎಂದು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (FICCI)ಯ 93ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ಉತ್ಪಾದನಾ - ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯಡಿ ನಾವು ಈ ಗುರಿ ಹೊಂದಿದ್ದೇವೆ. ಅಲ್ಲದೇ ಪಿಎಲ್ಐ ಯೋಜನೆಯನ್ನು ಇತರ ಕ್ಷೇತ್ರಗಳಿಗೆ ವಿಸ್ತರಿಸಿ ಭಾರತವನ್ನು 'ಎಲೆಕ್ಟ್ರಾನಿಕ್ ಉತ್ಪನ್ನಗಳ ಕೇಂದ್ರ'ವನ್ನಾಗಿ ಮಾಡಲು ಸರ್ಕಾರ ಯೋಜಿಸುತ್ತಿದೆ ಎಂದರು.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಬೇಕು ಎಂದು ನಾವು ಬಯಸಿದ್ದೆವು. 2017 ರಲ್ಲಿ ಭಾರತ ಈ ಸ್ಥಾನವನ್ನು ಪಡೆಯಿತು. ಈಗ ಚೀನಾವನ್ನು ಹಿಂದಿಕ್ಕುವಂತೆ ಭಾರತವನ್ನು ಒತ್ತಾಯಿಸುತ್ತಿದ್ದೇನೆ. 2019ರ ಎಲೆಕ್ಟ್ರಾನಿಕ್ಸ್ ರಾಷ್ಟ್ರೀಯ ನೀತಿ (ಎನ್‌ಪಿಇ) ಅಡಿ 2025ರ ವೇಳೆಗೆ 26 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಎಲೆಕ್ಟ್ರಾನಿಕ್ ಉತ್ಪಾದನಾ ವಹಿವಾಟನ್ನು ಸರ್ಕಾರ ರೂಪಿಸಿದೆ. ಇದರಲ್ಲಿ 13 ಲಕ್ಷ ಕೋಟಿ ರೂ. ಮೊಬೈಲ್ ಫೋನ್ ವಿಭಾಗದಿಂದ ಸಿಗುವ ನಿರೀಕ್ಷೆಯಿದೆ ಎಂದು ರವಿಶಂಕರ್ ತಿಳಿಸಿದರು.
ಇದನ್ನೂ ಓದಿ: ಮಂಗಳೂರಿನಿಂದ ಮಾಲ್ಡೀವ್ಸ್ಗೆ ಮೊದಲ ಬಾರಿಗೆ ತರಕಾರಿ, ಸಗಣಿ ಗೊಬ್ಬರ ರಫ್ತು
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಾಗೂ 'ಮೇಕ್ ಇನ್ ಇಂಡಿಯಾ' ಅಡಿ ಭಾರತವನ್ನು ಪರ್ಯಾಯ ಉತ್ಪಾದನಾ ಕೇಂದ್ರವಾಗಿ ಮಾರ್ಪಾಡು ಮಾಡಲು ಭಾರತದ ವ್ಯವಹಾರ ಸುಲಭಗೊಳಿಸಲು ಪಿಎಲ್ಐ ವಿನ್ಯಾಸಗೊಳಿಸಲಾಗಿದೆ. ಜಾಗತಿಕ ಚಾಂಪಿಯನ್ ಕಂಪನಿಗಳು ಭಾರತಕ್ಕೆ ಬರಲು ಮತ್ತು ಭಾರತೀಯ ಕಂಪನಿಗಳನ್ನು ರಾಷ್ಟ್ರೀಯ ಚಾಂಪಿಯನ್ ಆಗಿ ಮಾಡುವುದೇ ಇದರ ಉದ್ದೇಶ ಎಂದು ಸಚಿವರು ಹೇಳಿದರು.