ಚೆನ್ನೈ: ಕಳೆದ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ಸ್ನಾಯುಸೆಳೆತಕ್ಕೊಳಗಾಗಿ ಇಡೀ ಐಪಿಎಲ್ ಮಿಸ್ ಮಾಡಿಕೊಂಡಿದ್ದ ಸಿಎಸ್ಕೆ ತಂಡದ ಕೇದಾರ್ ಜಾಧವ್ ಪ್ರಸ್ತುತ 12ನೇ ಆವೃತ್ತಿಯ ಐಪಿಎಲ್ನಿಂದಲೂ ಹೊರ ಬಿದ್ದಿದ್ದಾರೆ.
ಈ ಐಪಿಎಲ್ನಲ್ಲಿ ಪ್ಲೇಆಫ್ಗೆ ಎಂಟ್ರಿಕೊಟ್ಟಿರುವ ಸಿಎಸ್ಕೆ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆದ ಕೇದಾರ್ ಜಾಧವ್ ನಿನ್ನೆ ನಡೆದ ಪಂಜಾಬ್ ವಿರುದ್ಧದ ಸಿಎಸ್ಕೆಯ ಕೊನೆಯ ಲೀಗ್ ಪಂದ್ಯದ ವೇಳೆ ಬೌಂಡರಿ ತಡೆಯುವ ವೇಳೆ ಭುಜಕ್ಕೆ ಗಾಯ ಮಾಡಿಕೊಂಡು ಮೈದಾನ ತೊರೆದಿದ್ದರು.
34 ವರ್ಷದ ಕೇದಾರ್ ಜಾಧವ್ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಗಾಯಗೊಂಡಿರುವುದು ಕೇವಲ ಸಿಎಸ್ಕೆಗೆ ಮಾತ್ರವಲ್ಲ ಟೀಮ್ ಇಂಡಿಯಾಕ್ಕೂ ದೊಡ್ಡ ಹೊಡೆತ ತಂದಿದೆ. ಸಿಎಸ್ಕೆಗೂ ಕೂಡ ಇವರ ಬದಲು ಯಾರನ್ನು ಆಡಿಸಬೇಕೆಂಬುದು ಇದೀಗ ತಲೆ ನೋವು ತಂದಿದೆ.
ಕೇದಾರ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಆದರೆ, ಸ್ಕ್ಯಾನಿಂಗ್ ನಂತರ ಮುಂದಿನ ಪಂದ್ಯಗಳಲ್ಲಿ ಆಡಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಕೋಚ್ ಫ್ಲೆಮಿಂಗ್ ತಿಳಿಸಿದ್ದಾರೆ.
ಒಂದು ವೇಳೆ ಕೇದಾರ್ ಜಾಧವ್ ಗಾಯ ಗಂಭೀರವಾದರೆ ವಿಶ್ವಕಪ್ ಟೂರ್ನಿಯಿಂದ ಹೊರ ಬೀಳಲಿದ್ದು, ಇವರ ಬದಲಿಗೆ ಬ್ಯಾಕ್ ಅಪ್ ಪ್ಲೇಯರ್ ಆಗಿರುವ ಅಂಬಾಟಿ ರಾಯ್ಡುರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆದರೆ, ಐಪಿಎಲ್ನಲ್ಲಿ ರಾಯ್ಡು ಕಳಪೆ ಪ್ರದರ್ಶನ ನೀಡಿದ್ದು 14 ಪಂದ್ಯಗಳಿಂದ ಕೇವಲ 219 ರನ್ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ ಕೂಡ 90 ಇರುವುದರಿಂದ ಬಿಸಿಸಿಐಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಮೂಡಿಸಿದೆ.