ನವದೆಹಲಿ: ಬಹುತೇಕ ಮತಗಟ್ಟೆ ಸಮೀಕ್ಷೆಗಳು ನರೇಂದ್ರ ಮೋದಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಭವಿಷ್ಯ ನುಡಿದಿವೆ.ಆದರೆ,ಒಂದು ವೇಳೆ ಈ ಸಮೀಕ್ಷೆಗಳು ಸುಳ್ಳಾದಲ್ಲಿ ಅವರು ಸರ್ಕಾರ ರಚಿಸಲು ಬಾಹ್ಯ ಬೆಂಬಲ ಕೋರಬೇಕಾಗುತ್ತದೆ.ಇದೀಗ ಇಂಥದ್ದೊಂದು ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಒಂದುವೇಳೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಸಂಖ್ಯೆ '272' ದಾಟಲು ಅಸಾಧ್ಯವಾದಲ್ಲಿ ದೇಶದಲ್ಲಿ ಯಾವೆಲ್ಲಾ ಪಕ್ಷಗಳು ಸರ್ಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ನೋಡೋಣ.
ನವೀನ್ ಪಟ್ನಾಯಕ್
ಒಡಿಶಾದಲ್ಲಿ ಬಿಜೆಡಿ ನೇತೃತ್ವವಹಿಸಿರುವ ನವೀನ್ ಪಟ್ನಾಯಕ್,ಈ ನಿಟ್ಟಿನಲ್ಲಿ ಬಹಳ ಮುಖ್ಯ ಪಾತ್ರನಿರ್ವಹಿಸುತ್ತಾರೆ.ಅತಂತ್ರ ಸಂಸತ್ತು ರಚನೆಯಾದರೆ,ಇವರ ಬಳಿ ಬೆಂಬಲಕ್ಕಾಗಿ ಮೋದಿ ಮತ್ತು ರಾಗಾ ದುಂಬಾಲು ಬೀಳುವುದು ಖಚಿತ.ದೇಶದ ಸಂಸತ್ತಿನ ಒಟ್ಟು ಸಂಖ್ಯೆಯಲ್ಲಿ 21 ಸದಸ್ಯರು ದೇಶದ ಪೂರ್ವಭಾಗದ ರಾಜ್ಯ ಒಡಿಶಾದಿಂದ ಆಯ್ಕೆಯಾಗಿ ಬರ್ತಾರೆ.ಚುನಾವಣಾ ಸಮೀಕ್ಷೆಗಳ ಪ್ರಕಾರ,ಈ ಬಾರಿ ಬಿಜೆಡಿ ಸುಮಾರು 15 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.
ಕೆ.ಚಂದ್ರ ಶೇಖರ ರಾವ್
ತೆಲಂಗಾಣದಲ್ಲಿ ಕೆಸಿಆರ್ ಎಂದೇ ಕರೆಯಲ್ಪಡುವ ಕಲ್ವಕುಂಟಲಾ ಚಂದ್ರಶೇಖರ್ ರಾವ್ ದೇಶದ ದಕ್ಷಿಣದ ಹೊಸ ರಾಜ್ಯದ ಸಿಎಂ. ಇವರು ಈಗಾಗಲೇ ಕೇಂದ್ರದಲ್ಲಿ ಬಿಜೆಪಿಯೇತರ ಹಾಗು ಕಾಂಗ್ರೆಸ್ಸೇತರ ಸರ್ಕಾರ ರಚಿಸಲು ತಾಲೀಮು ನಡೆಸುತ್ತಿದ್ದಾರೆ.ಈ ಬಾರಿ ಚುನಾವಣೆಯಲ್ಲಿ ಅವರು ಬಿಜೆಪಿ ಪರ ಮೃದು ಧೋರಣೆ ತಾಳಿದ್ದು ಕಮಲ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಸಾಕಷ್ಟು ಕುತೂಹಲವಿದೆ.ತೆಲಂಗಾಣದ ಒಟ್ಟು 17 ಸ್ಥಾನಗಳ ಪೈಕಿ 10 ಟಿಆರ್‌ಎಸ್ ಸಂಸದರಿದ್ದಾರೆ.ಈ ಬಾರಿ ಈ ಪಕ್ಷದಿಂದ 13 ಸದಸ್ಯರು ಆಯ್ಕೆಾಯಾಗುವ ಸಾಧ್ಯತೆ ದಟ್ಟವಾಗಿದೆ.
ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಲ ಲೋಕಸಭೆಗೆ 42 ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸುತ್ತದೆ.ನವದೆಹಲಿಯಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮುಖ್ಯ ಪಾತ್ರ ನಿಭಾಯಿಸಲಿದೆ.ಕಳೆದ 6 ತಿಂಗಳಿಂದ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ದೀದಿ,ಈ ಬಾರಿ ಯುಪಿಎಗೆ ಬೆಂಬಲ ನೀಡುವುದರಲ್ಲಿ ಅನುಮಾನ ಕಾಣುತ್ತಿಲ್ಲ. 16ನೇ ಲೋಕಸಭೆಯಲ್ಲಿ ಒಟ್ಟು 33 ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರಿದ್ದಾರೆ.ಎಕ್ಸಿಟ್ ಪೋಲ್ ಪ್ರಕಾರ, ಈ ಬಾರಿ ಟಿಎಂಸಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳಿಸುವ ಸಾಧ್ಯತೆಯಿದ್ದು 24-29 ಸ್ಥಾನಗಳಿಸಲಿದೆ ಎನ್ನಲಾಗಿದೆ.
ಮಾಯಾವತಿ
63 ವರ್ಷದ ಮಾಯಾವತಿ ಬಹುಜನ ಸಮಾಜವಾದಿ ಪಕ್ಷದ ಪ್ರಧಾನ ನಾಯಕಿ.ಉತ್ತರ ಪ್ರದೇಶದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ಬಿಎಸ್‌ಪಿ ಈ ಬಾರಿ ಯುಪಿಯಲ್ಲಿ ಸರ್ಕಾರ ರಚಿಸಲು ಸಮಾಜವಾದಿ ಪಕ್ಷ ಹಾಗು ಆರ್‌ಎಲ್‌ಡಿ ಜೊತೆ ಕೈ ಜೋಡಿಸಿತ್ತು. ಲೋಕ ಸಮರದ ನಂತರ, ಮೇ 20 ರಂದು ವಿರೋಧ ಪಕ್ಷಗಳು ಕರೆದ ಸಭೆಗೆ ಅವರು ಹಾಜರಾಗಿಲ್ಲ. ಅವರ ಈ ನಡೆ ಹುಬ್ಬೇರಿಸಿತ್ತು.ಈ ಬಾರಿ ಲೋಕಸಮರಕ್ಕೆ ಸಮಾಜವಾದಿ ಪಕ್ಷದ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದು, ಬಿಜೆಪಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಕಂಡುಬಂದಿದೆ. ಮತಗಟ್ಟೆ ಸಮೀಕ್ಷೆ ಪ್ರಕಾರ,ಬಿಎಸ್‌ಪಿ ಮತ್ತು ಎಸ್‌ಪಿ 20 ರಿಂದ 45 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಕಂಡುಬಂದಿದೆ.
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್, 80 ಲೋಕಸಭೆ ಸದಸ್ಯರನ್ನು ಹೊಂದಿರುವ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ.ಈ ಬಾರಿ ಬಿಎಸ್‌ಪಿ ಜೊತೆಗಿನ ಮೈತ್ರಿ ಕಾರಣ ಅವರು ರಾಜ್ಯದಲ್ಲಿ ದಲಿತ ಮತ್ತು ಹಿಂದುಳಿತದ ಹೆಚ್ಚಿನ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ಎಂ.ಕೆ ಸ್ಟಾಲಿನ್
ದಕ್ಷಿಣ ಭಾರತದ ಮತ್ತೊಂದು ಪ್ರಬಲ ರಾಜ್ಯ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ.ದೇಶದಲ್ಲೇ ಎರಡನೇ ಅತಿದೊಡ್ಡ ಅರ್ಥವ್ಯವಸ್ಥೆ ಇರುವ ರಾಜ್ಯದಲ್ಲಿ, ಸ್ಟಾಲಿನ್ ಸಾರ್ವಜನಿಕವಾಗಿಯೇ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬೆಂಬಲ ಸೂಚಿಸಿದ್ದಾರೆ. ಎಕ್ಸಿಟ್ ಪೋಲ್ ಪ್ರಕಾರ, 39 ಸದಸ್ಯ ಬಲವಿರುವ ರಾಜ್ಯದಲ್ಲಿ 27 ಸ್ಥಾನಗಳನ್ನು ಡಿಎಂಕೆ ಗೆಲ್ಲಲಿದೆ ಎನ್ನಲಾಗುತ್ತಿದೆ.ಆದ್ರೆ ಫಲಿತಾಂಶದ ಬಳಿಕ ಸರ್ಕಾರ ರಚನೆ ಕಸರತ್ತುಗಳ ಹಿನ್ನೆಲೆಯಲ್ಲಿ ಬಿಜೆಪಿ ಕೂಡಾ ಈ ಪಕ್ಷದ ನಾಯಕರ ಜೊತೆ ಟಚ್‌ನಲ್ಲಿದೆ ಎಂದೇ ಹೇಳಲಾಗುತ್ತಿದೆ.