ನವದೆಹಲಿ: ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಮನೆಯಲ್ಲಿ ಭೀಕರ ಬಾಂಬ್ ಸ್ಪೋಟ ನಡೆಸಲು 1989ರಲ್ಲಿ ಉಗ್ರರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಸುದ್ದಿಯನ್ನು ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆ ಬಾಯ್ಬಿಟ್ಟಿದ್ದಾರೆ.
ಮುಂಬೈಯಲ್ಲಿ ಬಾಳ್ ಠಾಕ್ರೆಯವರ 'ಮಾತೋಶ್ರಿ' ಹೆಸರಿನ ಮನೆ ಇದೆ. 1,989 ರಲ್ಲಿ ಶರದ್ ಪವಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಗುಪ್ತಚರ ಮೂಲಗಳಿಂದ ಈ ವಿಚಾರ ಗೊತ್ತಾದ ಬಳಿಕ ಪವಾರ್, ಬಾಳ್ ಠಾಕ್ರೆ ಕಿರಿ ಮಗ ಉದ್ಧವ್ ಠಾಕ್ರೆಯವರಿಗೆ ಬೆದರಿಕೆಯ ಬಗ್ಗೆ ಮಾಹಿತಿ ತಲುಪಿಸಿದ್ದರು ಎಂಬುದಾಗಿ ನಾರಾಯಣ ರಾಣೆ ಹೇಳಿದರು.
ಈ ವಿಷಯ ತಿಳಿಯುತ್ತಿದ್ದಂತೆ ಬಾಳ್ ಠಾಕ್ರೆ ಅನಿವಾರ್ಯವಾಗಿ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ಇರುವ ಪ್ರದೇಶಕ್ಕೆ ತೆರಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಖಲಿಸ್ತಾನ್ ಚಳವಳಿ ವಿರೋದಿಸಿದ್ದ ಬಾಳ್ ಠಾಕ್ರೆ:
ಠಾಕ್ರೆ ಕುಟುಂಬದ ಸದಸ್ಯರು ಖಲಿಸ್ತಾನ್ ಹೋರಾಟಗಾರರ ಹಿಟ್ ಲಿಸ್ಟ್‌ನಲ್ಲಿದ್ದರು. ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಬೆಂಬಲಿಗರು ಮುಂಬೈ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಮಹಾನಗರಗಳಲ್ಲಿಯೂ ಇದ್ದರು. ಠಾಕ್ರೆ, ಖಲಿಸ್ತಾನ್ ಪ್ರತ್ಯೇಕತಾವಾದವನ್ನು ಬಹಿರಂಗವಾಗಿಯೇ ವಿರೋಧಿಸುತ್ತಿದ್ದರು.ಈ ಹಿನ್ನೆಲೆಯಲ್ಲಿ ಬಾಳ್ ಠಾಕ್ರೆ ಖಲಿಸ್ತಾನಿ ಹೋರಾಟಗಾರರ ವಿರೋಧ ಕಟ್ಟಿಕೊಂಡಿದ್ದರು. ಅಷ್ಟು ಮಾತ್ರವಲ್ಲ, ಒಂದು ವೇಳೆ ಸಿಖ್ಖರು ಖಲಿಸ್ತಾನ್ ಪ್ರತ್ಯೇಕವಾದಿಗಳಿಗೆ ಹಣಕಾಸು ನೆರವು ಒದಗಿಸುವುದನ್ನು ನಿಲ್ಲಿಸದೇ ಇದ್ದರೆ, ಅವರನ್ನು ಮುಂಬೈ ನಗರದಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಿಷ್ಕರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.