ಉಡುಪಿ: ಸುವರ್ಣ ತ್ರಿಭುಜ ಬೋಟ್ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಣೆಯಾದ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಧನ ನೀಡುವ ಆದೇಶ ಹೊರಡಿಸಿದೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಮತ್ತು ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಧನ ನೀಡಲಾಗುವುದು ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ.
ಉಡುಪಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ ಮೀನುಗಾರರ ಸಂಕಷ್ಟ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಂತ್ರಸ್ಥ ಕುಟುಂಬಗಳಿಗೆ ಹಣ ವಿತರಿಸಲಾಗುತ್ತದೆ ಎಂದರು.
ಕಳೆದ ಡಿಸೆಂಬರ್ 15ರಂದು ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳು ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮಾಲ್ವಾನ್ ಬಳಿ ಪತ್ತೆಯಾಗಿತ್ತು.ಡಿಸೆಂಬರ್ 13ರಂದು ಉಡುಪಿಯ ಮಲ್ಪೆ ಬೀಚ್ನಿಂದ 7 ಜನ ಮೀನುಗಾರರು ಸುವರ್ಣ ತ್ರಿಭುಜ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿದ್ರು. ಮಲ್ಪೆಯ ಮೂವರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರಿದ್ದರು. ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆ ಸಮೀಪದಿಂದ ಮೀನುಗಾರರ ಸಹಿತ ನಿಗೂಢವಾಗಿ ಕಾಣೆಯಾಗಿತ್ತು.
ಇದರ ಶೋಧ ಕಾರ್ಯ ನಡೆಸಿದಾಗ ಬರೋಬ್ಬರಿ ಐದು ತಿಂಗಳ ನಂತರ ಮಹಾರಾಷ್ಟ್ರದ ಮಾಳ್ವಣ್ ಕಡಲ ತೀರದಿಂದ 33 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿತ್ತು.