ನವದೆಹಲಿ: ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಮ್ಯೂಕೋರಮೈಕೋಸಿಸ್ (black fungus)ನ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ, ಫಂಗಸ್ಗಳು ಮಾನವನ ಸಣ್ಣ ಮತ್ತು ದೊಡ್ಡ ಕರುಳುಗಳ ಮೇಲೆ ತೀವ್ರ ಹಾನಿಯನ್ನು ಉಂಟು ಮಾಡುತ್ತಿದೆ ಎಂದು ಕಂಡು ಬಂದಿದೆ.
ಆಸ್ಪತ್ರೆ ಒದಗಿಸಿದ ಮಾಹಿತಿಯ ಪ್ರಕಾರ, ಮೇ 13 ರಂದು 49 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯಲ್ಲಿ ಹೊಟ್ಟೆನೋವು, ವಾಂತಿ, ಮಲಬದ್ಧತೆಯಂತಹ ಸಮಸ್ಯೆಗಳು ಕಂಡು ಬಂದವು. ಈ ಹಿಂದೆ ಆಕೆಗೆ ಸ್ತನ ಕ್ಯಾನ್ಸರ್ ಇದ್ದ ಕಾರಣ ಸ್ತನವನ್ನು ತೆಗೆಯಲಾಗಿತ್ತು. ಅವಳ ಕೀಮೋಥೆರಪಿ 4 ವಾರಗಳ ಹಿಂದೆ ಮುಗಿದಿದೆ. ಈ ಬಳಿಕ ಸಿಟಿ ಸ್ಕ್ಯಾನ್ ಮಾಡಿದಾಗ, ಮಹಿಳೆಯ ಹೊಟ್ಟೆಯಲ್ಲಿ ವಿಭಿನ್ನ ತರದ ಸ್ವಲ್ಪ ಗಾಳಿ ಮತ್ತು ದ್ರವ ಕಾಣಿಸಿಕೊಂಡಿದ್ದು, ಇದು ಸಣ್ಣ ಕರುಳಿನಲ್ಲಿ ರಂಧ್ರವನ್ನು ಸೂಚಿಸುತ್ತಿತ್ತು.
ರೋಗಿಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಆಸ್ಪತ್ರೆಯ ಇನ್ಸಿಟಿಟ್ಯೂಟ್ ಆಫ್ ಲಿವರ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಪ್ಯಾಂಕ್ರಿಯಾಟಿಕೊಬಿಲಿಯರಿ ಸೈನ್ಸಸ್ ಅಧ್ಯಕ್ಷ ಡಾ.ಅನಿಲ್ ಅರೋರಾ ಹೇಳಿದ್ದಾರೆ. ನಾವು ತಕ್ಷಣ ಕಾರ್ಯಪ್ರವೃತ್ತರಾಗಿ ಚಿಕಿತ್ಸೆ ನೀಡಿದ್ದೇವೆ ಎಂದರು.
ಮಹಿಳೆಯ ಹೊಟ್ಟೆಗೆ ಪೈಪ್ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಸವಾಲಾಗಿದೆ. ಇದಕ್ಕಾಗಿ 4 ಗಂಟೆಗಳ ಸಮಯ ತೆಗೆದುಕೊಂಡೆವು. ಸಣ್ಣ ಕರುಳು ಮತ್ತು ದೊಡ್ಡ ಕರುಳಿನ ರಂಧ್ರಗಳನ್ನು ಆಪರೇಷನ್ ಮಾಡಿ ಮುಚ್ಚಲಾಗಿದೆ ಎಂದು ವೈದ್ಯ ಸಮೀರನ್ ನಂದಿ ಹೇಳಿದರು.
ಒಟ್ಟಾರೆಯಾಗಿ ಇಂತಹ ಮಾರಕ ರೋಗಗಳು ಮಹಿಳೆಯ ದೇಹದೊಳಗೆ ಸೇರಿ ಸಾಕಷ್ಟು ನೋವನ್ನು ನೀಡಿದೆ. ಪ್ರಸ್ತುತ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.