ಹುಬ್ಬಳ್ಳಿ: ಉತ್ತರ ಕರ್ನಾಟಕದಾದ್ಯಂತ ಭೀಕರ ಬರಗಾಲಕ್ಕೆ ಜನ ಜಾನುವಾರುಗಳು ತತ್ತರಿಸಿವೆ. ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ವ್ಯಾಪಕವಾಗಿ ಎದುರಾಗಿದೆ.
ಜೂನ್ ಮೊದಲ ವಾರವಾದರೂ ಮುಂಗಾರು ಬಾರದ ಪರಿಣಾಮ ರೈತರು ಜಾನುವಾರುಗಳನ್ನು ಮಾರಾಟ ಮಾಡಲು ತಯಾರಾಗಿದ್ದಾರೆ. ಬಳ್ಳಿ ಶೇಂಗಾ, ಗೋವಿನ ಜೋಳ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಬಂದಿರುವುದರಿಂದ ಜಾನುವಾರುಗಳಿಗೆ ಮೇವು ಹೊಂದಿಸಲು ರೈತರು ಪರದಾಡುತ್ತಿದ್ದಾರೆ. ಇನ್ನೂ ಪಶುಸಂಗೋಪನಾ ಇಲಾಖೆ ಜಿಲ್ಲೆಯ ಹಲವಾರು ಕಡೆ ಮೇವು ಬ್ಯಾಂಕ್ ತೆರೆದಿದ್ದರೂ ಇದರಲ್ಲಿ ಲಭ್ಯವಿರುವ ಮೇವು ಕಳಪೆ ಗುಣಮಟ್ಟದ್ದಾಗಿದೆ ಎಂಬ ಕಾರಣಕ್ಕೆ ರೈತರು ಅಲ್ಲಿ ಮೇವು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಮೇವಿನ ಸಮಸ್ಯೆಯಿಂದಾಗಿ ರೈತರು ಎತ್ತುಗಳನ್ನು ಮಾರಾಟ ಮಾಡಲು ಜಾನುವಾರು ಸಂತೆಗೆ ಬರುತ್ತಿದ್ದಾರೆ. ವರ್ಷದ ಹಿಂದೆ 95 ಸಾವಿರ ರೂಪಾಯಿಗೆ ಖರೀದಿಸಿದ್ದ ಜೋಡೆತ್ತುಗಳನ್ನು ಇಂದು 40 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಚುನಾವಣೆಗೆ ಎಂದು ಬಂದ ರಾಜಕಾರಣಿಗಳು ಮತ್ತೆ ನಮ್ಮ ಕಡೆ ತಿರುಗಿಯೂ ನೋಡಿಲ್ಲ. ನಮ್ಮ ಗೋಳು ಕೇಳಲು ಯಾರೂ ತಯಾರಿಲ್ಲ ಎಂದು ರೈತರು ಜಾನುವಾರು ಸಂತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.