ನವದೆಹಲಿ : ಮಹಿಳಾ ಮೀಸಲಾತಿ ಮಸೂದೆ ಸಂಬಂಧ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಅಂಗೀಕರಿಸಿರುವ ಮಹಿಳಾ ಮೀಸಲಾತಿಯು 2034ರಲ್ಲಿ ಲೋಕಸಭೆ ಚುನಾವಣೆ ಸಂದರ್ಭ ಜಾರಿಗೆ ಬರಲಿದೆ. ಮುಂಬರುವ ವಿಧಾನಸಭೆ ಚುನಾವಣೆಗಳು ಮತ್ತು ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ಈಗ ತರಲಾಗಿದೆ ಎಂದು ಆರೋಪಿಸಿದರು.
ಈ ಕುರಿತು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ತಕ್ಷಣಕ್ಕೆ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಒಂದು ವೇಳೆ ಮಸೂದೆಯನ್ನು ನಿಜವಾಗಿಯೂ ತರಬೇಕೆಂದಿದ್ದರೆ 2014ರಲ್ಲೇ ತರುತ್ತಿದ್ದರು ಎಂದು ಹೇಳಿದರು.
ಈ ಮಸೂದೆಯು 2029ರಲ್ಲಿ ಜಾರಿಗೆ ಬರುವುದಿಲ್ಲ. ಯಾಕೆಂದರೆ 1976ರಲ್ಲಿ ಕೊನೆಯ ಬಾರಿಗೆ ಕ್ಷೇತ್ರಗಳ ಪುನರ್ವಿಂಗಡನೆ ಮಾಡಲಾಗಿದೆ. ಬಳಿಕ 84ನೇ ತಿದ್ದುಪಡಿ ತರುವ ಮೂಲಕ ಪುನರ್ವಿಂಗಡನೆ ಕಾರ್ಯವನ್ನು ತಡೆಹಿಡಿದಿದ್ದೇವೆ. ಇದೀಗ ನಾವು 2026ರಲ್ಲಿ ಜನಗಣತಿಯನ್ನು ಪ್ರಾರಂಭಿಸಿದರೆ, ಅದು ಸುದೀರ್ಘವಾದ ಪ್ರಕ್ರಿಯೆ ಆಗುತ್ತದೆ. ನಾವು 140 ಕೋಟಿ ಜನ ಸಂಖ್ಯೆ ಹೊಂದಿದ್ದು, ಜನಗಣತಿ ಪ್ರಕ್ರಿಯೆಗೆ ಸರಿ ಸುಮಾರು ಒಂದರಿಂದ ಒಂದೂವರೆ ವರ್ಷ ಸಮಯ ಹಿಡಿಯುತ್ತದೆ ಎಂದು ಸಿಬಲ್ ಹೇಳಿದರು.
ಇದಷ್ಟೇ ಅಲ್ಲ ಇದರ ಜೊತೆಗೆ ಉತ್ತರ ಭಾರತದವರ ಬಹುದೊಡ್ಡ ಬೇಡಿಕೆಯಾದ ಜಾತಿ ಗಣತಿಯನ್ನು ಸೇರಿಸಲು ಹೋದರೆ ಮತ್ತಷ್ಟು ಅಧಿಕ ಸಮಯ ತೆಗೆದುಕೊಳ್ಳಲಿದೆ. ಯಾಕೆಂದರೆ ಈ ಜಾತಿ ಗಣತಿ ಬೇಡಿಕೆಯನ್ನು ಬಿಜೆಪಿ ನಿರಾಕರಿಸುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಒಂದು ವೇಳೆ ಈ ಬೇಡಿಕೆಯನ್ನು ನಿರಾಕರಿಸಿದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲುವ ಸಂಭವ ಜಾಸ್ತಿ ಇರುತ್ತದೆ. ಹೀಗಾಗಿ ಮಹಿಳಾ ಮೀಸಲಾತಿಯು 2034ರಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಲೋಕಸಭೆಯಲ್ಲಿ 2014ರಲ್ಲಿ ಯಾಕೆ ಈ ಮಸೂದೆಯನ್ನು ಜಾರಿಗೆ ತರಲಿಲ್ಲ ಎಂಬ ನಮ್ಮ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ಸಚಿವರು ಯಾವುದೇ ಉತ್ತರ ನೀಡಿಲ್ಲ. ಹಾಗಾಗಿ ಇದೊಂದು ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿಯ ರಾಜಕೀಯ ತಂತ್ರದ ಭಾಗವಾಗಿದೆ ಎಂದು ಹೇಳಿದರು. ಹೊಸ ಸಂಸತ್ ಭವನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಸತ್ ಭವನ ಚೆನ್ನಾಗಿದೆ. ಇದು ಸೆವೆನ್ ಸ್ಟಾರ್ ಕಟ್ಟಡದಂತೆ ಇದೆ. ನಾನು ಹೆಚ್ಚು ಆರಾಮದಾಯಕವಾದ, ನನ್ನ ಸಹೋದ್ಯೋಗಿಗಳಿಗೆ ಹತ್ತಿರವಾಗುವಂತಹ ಸಂಸತ್ನ್ನು ಇಷ್ಟಪಡುತ್ತೇನೆ ಎಂದು ತಿಳಿಸಿದರು.
ರಮೇಶ್ ಬಿಧೂರಿಯನ್ನು ಸಂಸತ್ನಿಂದ ಉಚ್ಚಾಟಿಸಬೇಕು : ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ವಿವಾದಾತ್ಮಕ ಪದಗಳನ್ನು ಬಳಸಿದ ಬಿಜೆಪಿ ಸಂಸದ ರಮೇಶ್ ಬಿಧೂರಿಯನ್ನು ಸಂಸತ್ತಿನಿಂದ ಉಚ್ಚಾಟನೆ ಮಾಡಬೇಕು ಎಂದು ಸಿಬಲ್ ಒತ್ತಾಯಿಸಿದ್ದಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಸಂಸತ್ತಿನಲ್ಲಿ ಇಂತಹ ನಡವಳಿಕೆಯನ್ನು ಕಂಡಿಲ್ಲ. ಇಂತಹ ಅಸಭ್ಯ ಭಾಷೆ ಮತ್ತು ವಿಷಪೂರಿತ ಮಾತುಗಳನ್ನು ಯಾವತ್ತೂ ಕೇಳಿರಲಿಲ್ಲ. ಇಂತಹ ವ್ಯಕ್ತಿಗಳನ್ನು ಸಂಸತ್ನಿಂದ ಉಚ್ಚಾಟನೆ ಮಾಡಬೇಕು. ಒಂದು ವೇಳೆ ಡ್ಯಾನಿಶ್ ಅವರು ಈ ರೀತಿ ಮಾಡಿದ್ದರೆ ಸಂಸತ್ನಲ್ಲಿ ಏನಾಗುತ್ತಿತ್ತು, ಲೋಕಸಭಾ ಸ್ಪೀಕರ್ ಏನು ಮಾಡುತ್ತಿದ್ದರು ಪ್ರಶ್ನಿಸಿದರು.
ಇದನ್ನೂ ಓದಿ : Women's reservation bill : ಮಹಿಳಾ ಮೀಸಲಾತಿ ಮಸೂದೆ ಸಾಗಿ ಬಂದ ಹಾದಿ