ಮುಂಬೈ (ಮಹಾರಾಷ್ಟ್ರ): ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಕ್ಕೂಟದಿಂದ ಅಭ್ಯರ್ಥಿಯಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಕಳೆದ ತಿಂಗಳು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೂ ಪ್ರಶಾಂತ್ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಶರದ್ ಪವಾರ್ ರಾಷ್ಟ್ರಪತಿ ಅಭ್ಯರ್ಥಿ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಶರದ್ ಪವಾರ್, ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಲೋಕಸಭೆ ಒಂದರಲ್ಲೇ ಬಿಜೆಪಿಗೆ 300ಕ್ಕೂ ಹೆಚ್ಚು ಸಂಸದರು ಇದ್ದಾರೆ. ಹಾಗಾಗಿ, ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಏನೆಂದು ನನಗೆ ಗೊತ್ತಿದೆ. ಆದ್ದರಿಂದ, ನಾನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಗುವುದಿಲ್ಲ ಎಂದು ಪವಾರ್ ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಮುಂದಿನ ವರ್ಷ ಕೊನೆಗೊಳ್ಳಲಿದೆ.
ಓದಿ : ‘ಮಹಾ’ ಸರ್ಕಾರದ ರಿಮೋಟ್ ಕಂಟ್ರೋಲ್ ಶರದ್ ಪವಾರ್ ಎಂದ ಪಟೋಲೆ: ಎಲ್ಲ ರಾಜಕೀಯದಾಟ!
ಪ್ರಶಾಂತ್ ಕಿಶೋರ್ ನನ್ನನ್ನು ಎರಡು ಬಾರಿ ಭೇಟಿಯಾಗಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆ ಮತ್ತು ರಾಷ್ಟ್ರಪತಿ ಚುನಾವನಣೆಯ ಯಾವುದೇ ಚರ್ಚೆಗಳು ನಡೆದಿಲ್ಲ. ಪ್ರಶಾಂತ್ ಕಿಶೋರ್ ಎರಡು ಬಾರಿ ಭೇಟಿಯಾದಾಗಲೂ ಅವರು ನಮಗೆ ಸಹಕಾರ ನೀಡುವ ಬಗ್ಗೆ ಮಾತನಾಡಿದ್ದಾರೆ. ಕಿಶೋರ್ ಚುನಾವಣಾ ಕಾರ್ಯತಂತ್ರ ರೂಪಿಸುವ ಕ್ಷೇತ್ರವನ್ನು ತೊರೆದಿರುವುದಾಗಿ ನನಗೆ ಹೇಳಿದ್ದಾರೆ ಎಂದು ಪವಾರ್ ಇದೇ ವೇಳೆ ತಿಳಿಸಿದ್ದಾರೆ.