ಕರ್ನೂಲ್ (ಆಂಧ್ರಪ್ರದೇಶ): ತನ್ನ ಪ್ರೀತಿಯನ್ನು ಶಾಶ್ವತವಾಗಿರಿಸಲು ಬಯಸಿದ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತಿಯ ಪ್ರತಿಮೆಯನ್ನು ಕೆತ್ತಿಸಿ, ಆತನ ಹೆಸರಿನಲ್ಲಿ ದೇವಾಲಯವನ್ನೇ ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದಾರೆ.
ಹೌದು.., ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಳ ನಿವಾಸಿ ಪದ್ಮಾ (43), 2017 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತನ್ನ ಪತಿ ಅಂಕಿ ರೆಡ್ಡಿಯನ್ನು ಕಳೆದುಕೊಂಡಿದ್ದರು. ಈ ಘಟನೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಆಕೆ, ಗಂಡನ ನೆನಪಿಗೆ ಏನಾದರೂ ಮಾಡಲು ಯೋಚಿಸಿದ್ದಾರೆ. ಇದೀಗ ಪತಿಯ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದಲ್ಲಿ ಮಕ್ಕಳ ಸಹಾಯದಿಂದ ಅಮೃತಶಿಲೆಯಿಂದ ದೇಗುಲ ಕಟ್ಟಿಸಿದ್ದಾರೆ.
ಪತಿಯೇ ತನಗೆ, ತನ್ನ ಮನೆಗೆ ಜೀವಂತ ದೇವರು ಎಂದು ಭಾವಿಸಿದ್ದ ಪದ್ಮಾ, ಇದೀಗ ನಿತ್ಯ ಗಂಡನ ಪ್ರತಿಮೆಗೆ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ 24 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಪುರಾಣ, ಐತಿಹ್ಯಗಳಲ್ಲಿ ಮಹಾಸತಿ ಅನಸೂಯ, ಸತಿ ಸಕ್ಕುಬಾಯಿ ಅವರ ಕಥೆಗಳನ್ನು ಕೇಳಿದ್ದೆವು, ಆದ್ರೆ ಕಲಿಯುಗದ ಪದ್ಮಾ ಸಹ ಮಹಾಸತಿಯರ ಸಾಲಿಗೆ ಸೇರುತ್ತಾರೆ ಎಂದರೆ ಅತಿಶಯೋಕ್ತಿ ಅನಿಸುವುದಿಲ್ಲ.