ಹೈದರಾಬಾದ್ : ಒಡಿಶಾದ ಮದ್ಯ ತಯಾರಿಕಾ ಕಂಪನಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಮೌನ ವಹಿಸಿರುವುದೇಕೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ, ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಜಿ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಐಟಿ ದಾಳಿ ವೇಳೆ ಪತ್ತೆಯಾಗಿರುವ ಕೋಟ್ಯಂತರ ರೂ. ನಗದು ಹಣವನ್ನು ಮುಂಬರುವ ಲೋಕಸಭೆ ಚುನಾವಣೆಗೆ ಬಳಸಲು ಉದ್ದೇಶಿಸಿದ್ದರು ಎಂದು ಆರೋಪಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರನ್ನು ಕಪ್ಪುಹಣದ ಹೀರೋ ಎಂದು ಕರೆದ ರೆಡ್ಡಿ, ಜಾರ್ಖಂಡ್ನ ಸಂಸದ ಧೀರಜ್ ಸಾಹು ಅವರು ರಾಹುಲ್ ಗಾಂಧಿಗೆ ಆಪ್ತರಾಗಿದ್ದಾರೆ. ಕಳೆದ ವರ್ಷ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ದಾಗ ಸಾಹು ಅವರು ರಾಹುಲ್ ಗಾಂಧಿ ಅವರಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದರು. ಇದು ಕಾಂಗ್ರೆಸ್ ನಾಯಕರು ದೇಶವನ್ನು ಯಾವ ರೀತಿ ಲೂಟಿ ಮಾಡಿದ್ದಾರೆ ಎಂಬುದಕ್ಕೆ ಜೀವಂತ ಸಾಕ್ಷಿ. ಕಾಂಗ್ರೆಸ್ ಪಕ್ಷವು ಸಾಹು ಅವರನ್ನು ಮೂರು ಬಾರಿ ರಾಜ್ಯಸಭೆಗೆ ಏಕೆ ನಾಮನಿರ್ದೇಶನ ಮಾಡಿದೆ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಾಹು ಅವರು 2018ರ ರಾಜ್ಯಸಭಾ ಚುನಾವಣೆ ಸಂದರ್ಭ ಅಫಿಡವಿಟ್ನಲ್ಲಿ 34 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತೋರಿಸಿದ್ದರು. ಈಗ ಅವರು ಇಷ್ಟೊಂದು ಕಪ್ಪು ಹಣವನ್ನು ಸಂಗ್ರಹಿಸಲು ಹೇಗೆ ಸಾಧ್ಯವಾಯಿತು. ದೇಶದ ಬೇರೆಡೆ ಐಟಿ ದಾಳಿ ನಡೆದಾಗ ಪ್ರತಿಕ್ರಿಯಿಸುವ ರಾಹುಲ್ ಗಾಂಧಿ ಅವರು, ಈ ದಾಳಿ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ. ನಿಮ್ಮ ಪಕ್ಷದ ಸಂಸದರ ಕಚೇರಿ ಮೇಲೆ ದಾಳಿ ನಡೆಸಿದಾಗಲೂ ಯಾಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿಲ್ಲ ಎಂದು ಕಿಶನ್ ರೆಡ್ಡಿ ಕೇಳಿದ್ದಾರೆ.
ಒಡಿಶಾ ಮೂಲದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆಯ ಭಾಗವಾಗಿ ಸಾಹು ಅವರಿಗೆ ಸಂಬಂಧಿಸಿರುವ ಕಂಪನಿಗಳ ಮೇಲೆ ವಿವಿಧೆಡೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಪತ್ತೆಯಾದ ಹಣ 290 ಕೋಟಿ ರೂಪಾಯಿಗೆ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಐಟಿ ಅಧಿಕಾರಿಗಳು ಪಶ್ಚಿಮ ಒಡಿಶಾದ ಮದ್ಯ ತಯಾರಿಕಾ ಸಂಸ್ಥೆ ಮತ್ತು ಅದರ ಘಟಕಗಳು ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರೊಂದಿಗೆ ಸಂಪರ್ಕ ಹೊಂದಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣಕ್ಕೂ ಕಾಂಗ್ರೆಸ್ಗೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಧೀರಜ್ ಸಾಹು ಅವರೇ ಉತ್ತರಿಸಬೇಕು ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ : ಒಡಿಶಾ ಐಟಿ ದಾಳಿ ಪ್ರಕರಣ: ಮತ್ತೆ 20 ಬ್ಯಾಗ್ ವಶಕ್ಕೆ, ಜಪ್ತಿ ಹಣ ₹ 290 ಕೋಟಿಗೆ ತಲುಪುವ ಸಾಧ್ಯತೆ