ಕವರ್ಧ(ಛತ್ತೀಸಗಢ): ಮೂರು ವರ್ಷದ ಮಗುವಿನ ಮೇಲೆ ತಾಯಿಯೊಬ್ಬಳು ಕುಡಿದ ನಶೆಯಲ್ಲಿ ಕ್ರೂರವಾಗಿ ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ಛತ್ತೀಸಗಡ್ನ ಕವರ್ಧದಲ್ಲಿ ಈ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ತಾಯಿ ಸ್ವಂತಃ ಮಗುವಿನ ಮೇಲೆ ಹಲ್ಲೆ ನಡೆಸಿದ್ದು, ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಗಾಗಲೇ ಪೊಲೀಸರು ತಾಯಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಹಲ್ಲೆ ನಡೆಸಿರುವ ತಾಯಿಗೆ ಮೂವರು ಮಕ್ಕಳಿದ್ದು, ಅವುಗಳನ್ನ ಇದೀಗ ಮಹಿಳಾ ಮತ್ತು ಮಕ್ಕಳ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಮಹಿಳೆ ಭಿಕ್ಷಾಟನೆ ಕೆಲಸ ಮಾಡುತ್ತಿದ್ದು, ಅಲ್ಲಿ ವಾಸ ಮಾಡುವ ಅನೇಕರು ತಮ್ಮ ಮಕ್ಕಳ ಮೇಲೆ ಅದೇ ರೀತಿಯ ಹಲ್ಲೆ ನಡೆಸುತ್ತಾರೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಸ್ಥಳೀಯರೊಬ್ಬರು ಇದರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಚಿತ್ರವೆಂದರೆ ಈ ವೇಳೆ ಮಗುವಿನ ರಕ್ಷಣೆಗೆ ಯಾರು ಸಹ ಮುಂದಾಗಿಲ್ಲ.
ವಿಡಿಯೋ ನೋಡಿರುವ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನ ವಶಕ್ಕೆ ಪಡೆದುಕೊಂಡಿದ್ದು, ಬಾಲಕಿಯನ್ನ ಮಹಿಳಾ ಮತ್ತು ಮಕ್ಕಳ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿದೆ. ಮಹಿಳೆ ಮದ್ಯಪಾನ ಮಾಡಿ ಈ ಕೃತ್ಯವೆಸಗಿದ್ದಾಳೆಂದು ತಿಳಿದು ಬಂದಿದ್ದು, ಈ ಹಿಂದೆ ಸಹ ಭಿಕ್ಷೆ ಬೇಡದಂತೆ ಮಹಿಳೆಗೆ ವಾರ್ನ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.