ಕೊರ್ಬಾ (ಛತ್ತೀಸ್‌ಗಢ): ಮಕ್ಕಳಿಗೆ ಪಾಠ ಮಾಡಿ, ತಪ್ಪು ದಾರಿ ಹಿಡಿಯದಂತೆ ಬುದ್ಧಿಮಾತು ಹೇಳಬೇಕಾದ ಶಿಕ್ಷಕನೇ ಇಲ್ಲಿ ದಾರಿ ತಪ್ಪಿದ್ದಾರೆ. ಶಾಲಾ ಅವಧಿಯಲ್ಲಿ ಕಂಠಪೂರ್ತಿ ಕುಡಿದು ತನ್ನ ಚೇಂಬರ್ನಲ್ಲಿ ಬಿದ್ದಿರುವ ಶಿಕ್ಷಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಕರಿಮತಿ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಮನಾರಾಯಣ ಪ್ರಧಾನ್ ಹೀಗೆ ಶಾಲೆಯಲ್ಲಿ ಕುಡಿದು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ರಾಮನಾರಾಯಣರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಮಕ್ಕಳ ದಾಖಲಾತಿಗೆ ಬಂದ ಮಹಿಳೆಯಿಂದ್ಲೇ ಬಾಡಿ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕ ಸಸ್ಪೆಂಡ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊರ್ಬಾ ಬ್ಲಾಕ್ ಶಿಕ್ಷಣಾಧಿಕಾರಿ ಎಲ್ ಎಸ್ ಜೋಗಿ, "ಶಿಕ್ಷಕನ ನಡವಳಿಕೆ ನೋಡಿದರೆ ನಮಗೆ ನಾಚಿಕೆಯಾಗುತ್ತಿದೆ. ಜಿಲ್ಲಾಡಳಿತದ ಅಧಿಕಾರಿಗಳ ಆದೇಶದ ಮೇರೆಗೆ ಶಿಕ್ಷಕನನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
ಶಿಕ್ಷಕ ಅಮಲೇರಿದ ಸ್ಥಿತಿಯಲ್ಲಿ ಕಾಣುತ್ತಿರುವುದು ಇದೇ ಮೊದಲಲ್ಲ ಎಂದು ಶಾಲೆಯ ವಿದ್ಯಾರ್ಥಿಗಳು ಹೇಳಿದ್ದಾರೆ.