ನವದೆಹಲಿ: ಸಾಧು ಸ್ವಭಾವದ ಎಂ.ವೆಂಕಯ್ಯನಾಯ್ಡು ಅವರ ಉಪರಾಷ್ಟ್ರಪತಿ ಅಧಿಕಾರವಧಿ ಇನ್ನೆರಡು ದಿನಗಳಲ್ಲಿ ಕೊನೆಯಾಗಲಿದೆ. 5 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದ ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ ಉಪರಾಷ್ಟ್ರಪತಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅವರು, ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ.
ಬಿಜೆಪಿ ಅಧ್ಯಕ್ಷರಾಗಿ ಮತ್ತು ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ದೇಶಾದ್ಯಂತ ವ್ಯಾಪಕವಾಗಿ ಸಂಚರಿಸಿದ ಅನುಭವ ಹೊಂದಿರುವ ವೆಂಕಯ್ಯನಾಯ್ಡು ಅವರು, ಉಪರಾಷ್ಟ್ರಪತಿಯಾಗಿಯೂ ಅದೇ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದರು. ಸರ್ಕಾರಿ ಮತ್ತು ಖಾಸಗಿ ವಲಯದ ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರು.
ರಾಜ್ಯಸಭೆಯಲ್ಲಿ ಬೀಳ್ಕೊಡುಗೆ: ಇದೇ ತಿಂಗಳ 10ರಂದು ಉಪರಾಷ್ಟ್ರಪತಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸುತ್ತಿರುವ ವೆಂಕಯ್ಯ ನಾಯ್ಡು ಅವರಿಗೆ ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿವಿಧ ಪಕ್ಷಗಳ ನಾಯಕರು ಮತ್ತು ಇತರ ಸದಸ್ಯರು ಭಾಗವಹಿಸಲಿದ್ದಾರೆ. ವೆಂಕಯ್ಯ ನಾಯ್ಡು ಅವರ ಆಡಳಿತಾವಧಿಯಲ್ಲಿ ಘಟಿಸಿದ ವಿದ್ಯಮಾನಗಳ ಸಂಗ್ರಹದ ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.