ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಹತ್ತಾರು ಬಿಜೆಪಿ ಮುಖಂಡರು ಪಕ್ಷ ತೊರೆದು, ಇಂದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ. ಅದಕ್ಕಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ.
ಸಮಾವೇಶದ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಹಾಗೂ ಚುನಾವಣೆ ನೀತಿ ಸಂಹಿತೆ ಬ್ರೇಕ್ ಮಾಡಿದ್ದಕ್ಕಾಗಿ ಇದೀಗ ಸಮಾಜವಾದಿ ಪಕ್ಷದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 144, 269, 270,341,188 ಸೇರಿದಂತೆ ಅನೇಕ ನಿಯಮಗಳ ಅಡಿ ದೂರು ದಾಖಲಾಗಿದೆ.
ಬಿಜೆಪಿಯಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಅನೇಕ ಶಾಸಕರು ಇಂದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದು, ಈ ವೇಳೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಕೋವಿಡ್ ನಿಯಮದ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶ ಪೊಲೀಸರು 2500 ಕಾರ್ಯಕರ್ತರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಈ ವೇಳೆ ಅನೇಕರು ಮಾಸ್ಕ್ ಹಾಕಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಸ್ಫೋಟಕ ಪತ್ತೆ ಹಚ್ಚಿ ನಿಷ್ಕೃಿಯಗೊಳಿಸಿದ ಎನ್‌ಎಸ್‌ಜಿ: ಗೌತಮ್ ಗಂಭೀರ್ ಮೆಚ್ಚುಗೆ
ಕೋವಿಡ್ ಕಾರಣಕ್ಕಾಗಿ ಜನವರಿ 15ರವರೆಗೆ ಯಾವುದೇ ರೀತಿಯ ಸಾರ್ವಜನಿಕ ರ್ಯಾಲಿ, ರೋಡ್ ಶೋ ನಡೆಸದಂತೆ ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದೆ. ಆದಾಗ್ಯೂ ಈ ಸಮಾರಂಭ ಆಯೋಜನೆ ಮಾಡಲಾಗಿತ್ತು.
ಬಿಜೆಪಿಯಿಂದ ಹೊರಬಂದಿರುವ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ, ಭಗವತಿ ಸಾಗರ್, ವಿನಯ್ ಶಕ್ಯ ಸೇರಿದಂತೆ ಅನೇಕರು ಅಖಿಲೇಶ್ ಯಾದವ್ ಸಮ್ಮುಖದಲ್ಲಿಂದು ಸಮಾಜವಾದಿ ಪಕ್ಷ ಸೇರಿಕೊಂಡರು.