ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 2017ರ ಚುನಾವಣೆಗಿಂತಲೂ ಹೆಚ್ಚಿನ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ಉತ್ತರ ಪ್ರದೇಶ ಡಿಸಿಎಂ ಮತ್ತು ಬಿಜೆಪಿ ಹಿರಿಯ ನಾಯಕ ಕೇಶವ್ ಪ್ರಸಾದ್ ಮೌರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಪ್ರದೇಶದಲ್ಲಿ ಈಗಾಗಲೇ ಎರಡು ಹಂತದ ಚುನಾವಣೆಗೆ ಮತದಾನ ಮುಗಿದಿದೆ. ಮೂರನೇ ಹಂತದ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಈ ಸಂದರ್ಭದಲ್ಲಿ ಈಟಿವಿ ಭಾರತ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಕೇಶವ ಪ್ರಸಾದ್ ಮೌರ್ಯ, ಬಿಜೆಪಿ ಡಬಲ್ ಎಂಜಿನ್ ಸರ್ಕಾರ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಿ ಸುರಕ್ಷಾ' ನೀತಿಯ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಇದೇ ವೇಳೆ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಹರಿಹಾಯ್ದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಲ್ಲಾ ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಅಖಿಲೇಶ್ ಕನಸು ಹೊಂದಿದ್ದರು. ಆದರೆ ಮತದಾರರು ಅವರ ಕನಸನ್ನು ನುಚ್ಚುನೂರು ಮಾಡಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಗ್ಗೆ ಅವರು ಹೇಳಿಕೊಂಡರು. ಆದರೆ 47 ಕ್ಷೇತ್ರಗಳನ್ನು ಗೆಲ್ಲಲಷ್ಟೇ ಸಾಧ್ಯವಾಯಿತು. 2019ರ ಲೋಕ ಚುನಾವಣೆಯಲ್ಲಿ ನರೇಂದ್ರ ಮೋದಿಯ ವಿಜಯಯಾತ್ರೆಯನ್ನು ತಡೆಯಲು ವಿಪಕ್ಷಗಳು ಒಂದಾಗಿದ್ದವು. ಆದರೂ ಬಿಜೆಪಿ ಭರ್ಜರಿ ಜಯಗಳಿಸಿತು ಎಂದು ಹೇಳಿದರು.
'ಹಿಜಾಬ್ ವಿವಾದ ತುಕ್ಡೆ ಗ್ಯಾಂಗ್ ಪಿತೂರಿ': ಪ್ರಸ್ತುತ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿರುವ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕೇಶವ ಪ್ರಸಾದ್ ಮೌರ್ಯ, ಇದು ದೇಶದ ಸಾಮಾಜಿಕ ಸಾಮರಸ್ಯವನ್ನು ಕದಡಲು 'ತುಕ್ಡೆ ಗ್ಯಾಂಗ್ ಮಾಡುತ್ತಿರುವ ರಾಜಕೀಯ ಪಿತೂರಿ' ಎಂದು ಹರಿಹಾಯ್ದರು. ಶಾಲೆಗಳಲ್ಲಿ ಏಕರೂಪದ ವಸ್ತ್ರಸಂಹಿತೆ ಇದ್ದು, ಎಲ್ಲರೂ ಅದನ್ನು ಪಾಲಿಸಬೇಕು. ಕನಿಷ್ಠ ಶಾಲಾ ದಿನಗಳಲ್ಲಾದರೂ ಸಮವಸ್ತ್ರ ಧರಿಸಬೇಕು. ಮನೆ ಅಥವಾ ಮಾರುಕಟ್ಟೆಯಲ್ಲಿ ತಮ್ಮಿಷ್ಟದ ಬಟ್ಟೆಗಳನ್ನು ಧರಿಸಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ತೊರೆದಿದ್ದೇಕೆ?.. ರಾಹುಲ್ ಗಾಂಧಿ ಹೇಳಿಕೆ ಹೀಗಿದೆ
'ಪವಿತ್ರ ನಗರಗಳ ಅಭಿವೃದ್ಧಿ ಬಿಜೆಪಿ ಆದ್ಯತೆ': ಉತ್ತರ ಪ್ರದೇಶದಲ್ಲಿರುವ ಕಾಶಿ, ಮಥುರಾ, ಅಯೋಧ್ಯೆ, ಚಿತ್ರಕೂಟ, ವಿಂಧ್ಯಾಚಲ ಮತ್ತು ವೃಂದಾವನ ಸೇರಿದಂತೆ ಎಲ್ಲಾ ಪವಿತ್ರ ನಗರಗಳನ್ನು ಅಭಿವೃದ್ಧಿಪಡಿಸುವುದು ಬಿಜೆಪಿಯ ಮೊದಲ ಆದ್ಯತೆಯಾಗಿದೆ ಎಂದು ಕೇಶವ ಪ್ರಸಾದ ಮೌರ್ಯ ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ, ವಾರಣಾಸಿಯ ಬಾಬಾ ವಿಶ್ವನಾಥ ಧಾಮ, ಮಾತಾ ವಿಂಧ್ಯವಸನಿ ಧಾಮ, ಪ್ರಯಾಗ್‌ರಾಜ್ ಧಾಮ, ಚಿತ್ರಕೂಟ ಧಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು. ಇದರ ಜೊತೆಗೆ ಕೃಷ್ಣನ ಜನ್ಮಸ್ಥಳವನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಹೇಳಿದರು.