ಛಿಂದ್ವಾರಾ(ಮಧ್ಯಪ್ರದೇಶ): ಹೋಳಿ ಹಬ್ಬದ ಸಂಭ್ರಮಾಚರಣೆ ವೇಳೆ ದುರಂತ ಸಂಭವಿಸಿದ್ದು, ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶ ಛಿಂದ್ವಾರಾದ ದೇವರ್ದ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಹೋಳಿ ಸ್ನಾನಕ್ಕೆಂದು ಅಣೆಕಟ್ಟೆಗೆ ತೆರಳಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸಿ, ಯುವಕರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಸ್ಥಳದಲ್ಲಿದ್ದ ಬೈಕ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೋಳಿ ನಿಮಿತ್ತ ಯುವಕರು ಅಣೆಕಟ್ಟೆಗೆ ಸ್ನಾನಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಸಿಎಸ್‌ಪಿ ಮೋತಿಲಾಲ್ ಕುಶ್ವಾಹ, ಹೋಳಿ ಆಡಿದ ಬಳಿಕ 6 ಜನ ಸ್ನೇಹಿತರು 2 ಬೈಕ್‌ಗಳಲ್ಲಿ ಜಮುನಿಯಾ ಬಳಿಯ ದೇವರ್ದ ಗ್ರಾಮದ ಹನುಮಾನ್ ದೇವಸ್ಥಾನದ ಹಿಂಭಾಗದಲ್ಲಿರುವ ಘೋಘ್ರ ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ, ರಾಹುಲ್ (19), ಆಕಾಶ್ (21) ಹಾಗೂ ಮತ್ತೊಬ್ಬ ಯುವಕ ನೀರಿನಲ್ಲಿ ಮುಳುಗಿದ್ದಾರೆ. ಆಗ ಅವರ ಜೊತೆಗಿದ್ದ ಇತರ ಸ್ನೇಹಿತರು ತಮ್ಮ ಬಟ್ಟೆ, ಹಗ್ಗಗಳ ಸಹಾಯದಿಂದ ರಕ್ಷಿಸಲು ಪ್ರಯತ್ನಿಸಿದರೂ ಕೂಡ ಯಶಸ್ವಿಯಾಗಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ಕುಡಿದ ಅಮಲಿನಲ್ಲಿ ತೂರಾಡುತ್ತಲೇ ಶಾಲೆಗೆ ಬಂದ ಶಿಕ್ಷಕ ಅಮಾನತು