ಹೈದರಾಬಾದ್: ತೆಲಂಗಾಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಗಡಿಯಲ್ಲಿ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಯಾವ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು.
ನೈಟ್ ಕರ್ಫ್ಯೂವನ್ನೂ ಸರಿಯಾಗಿ ಜಾರಿಗೊಳಿಸಿಲ್ಲ, ಧಾರ್ಮಿಕ ಸಭೆ, ಸಮಾರಂಭಗಳನ್ನು ನಿಯಂತ್ರಿಸಿಲ್ಲ, ಜನಸಂದಣಿ ಹೆಚ್ಚಾಗುತ್ತಿದೆ. ರಂಜಾನ್ ಬಳಿಕವಾದರೂ ಸೋಂಕು ತಡೆಗೆ ಸರಿಯಾದ ಕ್ರಮಗಳನ್ನು ಅನುಸರಿಸುತ್ತೀರಾ ಎಂದು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿತ್ತು. ಕೋವಿಡ್ ಟೆಸ್ಟ್ ಕೂಡ ಕಡಿಮೆಗೊಳಿಸಿದ್ದೀರಿ. ಇದರಿಂದಾಗಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಕೋರ್ಟ್ ತೀವ್ರವಾಗಿ ತರಾಟೆ ತೆಗೆದುಕೊಂಡಿತ್ತು.
ಇದನ್ನೂ ಓದಿ:ನಾಳೆಯಿಂದ 10 ದಿನಗಳವರೆಗೆ ತೆಲಂಗಾಣದಲ್ಲಿ ಲಾಕ್ಡೌನ್ ಜಾರಿ
ನ್ಯಾಯಾಲಯದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು.
ಅದರಂತೆ, ತೆಲಂಗಾಣ ಸರ್ಕಾರ ನಾಳೆಯಿಂದ 10 ದಿನಗಳವರೆಗೆ ರಾಜ್ಯದಲ್ಲಿ ಲಾಕ್ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಿದೆ.