ಸೂರತ್ (ಗುಜರಾತ್): ತಡ ರಾತ್ರಿ ಮನೆಗೆ ನುಗ್ಗಿದ ಮೂವರು ದರೋಡೆಕೋರರನ್ನು 20 ವರ್ಷದ ಯುವತಿಯೊಬ್ಬಳು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಕಾಲೇಜಿನಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ಪಡೆದಿದ್ದ ಆಕೆಗೆ ಧೈರ್ಯದಿಂದ ಖದೀಮರನ್ನು ಎದುರಿಸಲು ಸಹಕಾರಿಯಾಗಿದೆ. ಗುಜರಾತ್ನ ಸೂರತ್ ಜಿಲ್ಲೆಯ ಪಲ್ಸಾನಾ ತಾಲೂಕಿನ ಚಲತಾನ್ ಗ್ರಾಮದಲ್ಲಿ ಸಾಹಸಮಯ ಘಟನೆ ನಡೆದಿದೆ.
ಚಲತಾನ್ ಗ್ರಾಮದ ರಾಮಕಬೀರ್ ಸೊಸೈಟಿಯಲ್ಲಿ ಮಹಾರಾಷ್ಟ್ರ ಮೂಲದ ಬಾಬುರಾಮ್ ಸ್ವೈನ್ ಕುಟುಂಬ ವಾಸವಿದೆ. ಮಿಲ್ವೊಂದರ ಉದ್ಯೋಗಿಯಾದ ಬಾಬುರಾಮ್ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಪತ್ನಿ ಭಾರತಿಬೆನ್ ಮತ್ತು ಮಕ್ಕಳಾದ ರಿಯಾ ಮತ್ತು ರಿಚಾ ಮೂವರೇ ಇದ್ದರು. ಹಿರಿಯ ಮಗಳಾದ ರಿಯಾ ಮೊದಲ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ವಾರ್ಷಿಕ ಪರೀಕ್ಷೆಗಾಗಿ ರಾತ್ರಿ ಓದುತ್ತಾ ಕುಳಿತಿದ್ದಳು.
ರಾತ್ರಿ 1.30ರ ಸುಮಾರಿಗೆ ವಿದ್ಯುತ್ ಕಡಿತವಾಗಿತ್ತು. ಈ ವೇಳೆ, ಮೂವರು ದರೋಡೆಕೋರರು ಮನೆಗೆ ನುಗ್ಗಿದ್ದಾರೆ. ಅಷ್ಟರಲ್ಲೇ ವಿದ್ಯುತ್ ಕೂಡ ಬಂದಿದೆ. ಆಗ ಪ್ಯಾಡಲ್ ತರಹದ ಸಾಧನವನ್ನು ಹಿಡಿದು ಓರ್ವ ದರೋಡೆಕೋರ ರಿಯಾಳ ಬಳಿಗೆ ಹೋಗಿ ಬೆದರಿಸಲು ಯತ್ನಿಸಿದ್ದಾನೆ. ಆದರೆ, ಇದರಿಂದ ಕುಗ್ಗದ ರಿಯಾ ಧೈರ್ಯದಿಂದ ಅವನನ್ನು ಎದುರಿಸಿದ್ದಾಳೆ. ಅಲ್ಲದೇ, ಮತ್ತಿಬ್ಬರು ಕಳ್ಳರು ಸಹ ಮತ್ತೊಂದು ಕೋಣೆಯಲ್ಲಿದ್ದ ಭಾರತಿಬೆನ್ ಮತ್ತು ರಿಚಾ ಬಳಿಗೆ ತೆರಳಿದ್ದಾರೆ. ಆಗ ರಿಯಾ ಕಿರುಚುವ ಮೂಲಕ ಅವರನ್ನು ಎಚ್ಚರಿಸಿದ್ದಾಳೆ.
ಈ ವೇಳೆ ದರೋಡೆಕೋರ ಮತ್ತು ರಿಯಾ ನಡುವೆ ಘರ್ಷಣೆ ನಡೆಸಿದ್ದು, ಈ ಸಂದರ್ಭದಲ್ಲಿ ಆಕೆಯ ಕೈಗೆ ಪೆಟ್ಟಾಗಿ ರಕ್ತ ಬರಲು ಶುರುವಾಗಿದೆ. ಇದರಿಂದ ಗಾಬರಿಗೊಂಡ ಮೂವರು ದರೋಡೆಕೋರರನ್ನು ಓಡಿ ಹೋಗಿದ್ದಾರೆ. ಇನ್ನು, ರಿಯಾಳ ಕೈಗೆ ಗಾಯವಾಗಿ 24 ಹೊಲಿಗೆಗಳು ಬಿದ್ದವೆ.
ಇತ್ತ, ಕಾಲೇಜಿನಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ಪಡೆದಿದ್ದರಿಂದ ದರೋಡೆಕೋರರೊಂದಿಗೆ ತನಗೆ ಸೆಣಸಲು ಕಾರಣವಾಗಿತು ಎಂದು ರಿಯಾ ಹೇಳಿಕೊಂಡಿದ್ದಾಳೆ. ಅಲ್ಲದೇ, ರಿಯಾ ಸಾಹಸದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಹ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಎಂಥಾ ಬಿಸಿಲು.. ಎಂಥಾ ಬಿಸಿಲು... ನಲ್ಲಿ ಟ್ಯಾಪ್ ತಿರುಗಿಸಿ ನೀರು ಕುಡಿದ ಹಸು: ವಿಡಿಯೋ ವೈರಲ್