ಗಂದೇರ್‌ಬಾಲ್: ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೇಘಸ್ಫೋಟ ಉಂಟಾಗಿದ್ದು, ಮಧ್ಯ ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ಶ್ರೀನಗರ - ಲೇಹ್ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಭಾನುವಾರದಂದು ಗಂದರ್‌ಬಾಲ್ ಜಿಲ್ಲೆಯ ಕಂಗಾನ್ ನ ಶಾ ಮೊಹಲ್ಲಾ ಕುಲ್ಲನ್ ಪ್ರದೇಶದಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಗಳು ಭಾಗಶಃ ಹಾನಿಯಾಗಿದೆ ಎಂದು ವರದಿಯಾಗಿದೆ.
ಪ್ರವಾಹದಿಂದಾಗಿ ಸಂಚಾರ ಸ್ಥಗಿತಗೊಂಡಿದ್ದ ಶ್ರೀನಗರ-ಲೇಹ್ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯ ನಡೆಯುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಜೂನ್ 29 ರಂದು ಜಮ್ಮುವಿನಿಂದ ಅಮರನಾಥ ಯಾತ್ರೆ ಪ್ರಾರಂಭವಾಗಿದ್ದು, ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆ ಸಾಗುತ್ತಿದೆ. ಹಿಮಾಲಯದ ಮೇಲ್ಭಾಗದಲ್ಲಿರುವ ಸುಮಾರು 3,880 ಮೀಟರ್ ಎತ್ತರದಲ್ಲಿರುವ ಗುಹಾ ದೇವಾಲಯಕ್ಕೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಅವಳಿ ಮಾರ್ಗಗಳಿಂದ ಯಾತ್ರೆ ಸಾಗುತ್ತದೆ.