ಮುಂಬೈ : ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ಸೀಜ್ ಪ್ರಕರಣದಲ್ಲಿ ಬಂಧಿತರಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಅಕ್ಟೋಬರ್ 13ರಂದು ತನ್ನ ಉತ್ತರವನ್ನು ಸಲ್ಲಿಸುವಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ (ಎನ್‌ಸಿಬಿ) ವಿಶೇಷ ನ್ಯಾಯಾಲಯ ಸೋಮವಾರ ನಿರ್ದೇಶನ ನೀಡಿದೆ.
ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್, ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟನ್ಸ್ಸ್ (NDPS) ಕಾಯ್ದೆಗೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 13ರಂದು ನಡೆಸುವುದಾಗಿ ಹೇಳಿದರು.
ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 3ರಂದು ಬಂಧಿಸಲಾಗಿದೆ. ಅವರು ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಜಾಮೀನಿಗಾಗಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಸೋಮವಾರ, ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ಜಾಮೀನು ಅರ್ಜಿ ವಿಚಾರ ಪ್ರಸ್ತಾಪಿಸಿದಾಗ, ಎನ್‌ಸಿಬಿಯ ವಕೀಲರಾದ ಎ ಎಂ ಚಿಮಲ್ಕರ್ ಮತ್ತು ಅದ್ವೈತ್ ಸೇಠನಾ ಅವರು ತಮ್ಮ ಅಫಿಡವಿಟ್ ಸಲ್ಲಿಸಲು ಮತ್ತು ಪ್ರತಿಕ್ರಿಯಿಸಲು ಒಂದು ವಾರ ಕಾಲಾವಕಾಶ ಕೋರಿದರು.
ಈ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ. ಈ ಹಂತದಲ್ಲಿ ಆರ್ಯನ್ ಖಾನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಪ್ರಕರಣದ ತನಿಖೆಗೆ ಅಡ್ಡಿಯಾಗುತ್ತದೆಯೇ ಎಂಬುದನ್ನು ನೋಡಬೇಕು ಎಂದು ಅವರು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರ್ಯನ್ ಖಾನ್ ಪರ ವಕೀಲ ದೇಸಾಯಿ, ಇಲ್ಲಿ ವ್ಯಕ್ತಿಯ ಸ್ವಾತಂತ್ರ್ಯವನ್ನು ಪ್ರಶ್ನಿಸಲಾಗಿದೆ ಮತ್ತು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಪ್ರಕರಣದ ತನಿಖೆಯನ್ನು ನಿಲ್ಲಿಸುವುದಿಲ್ಲ ಎಂದು ವಾದಿಸಿದರು. ಇದಕ್ಕೆ ಉತ್ತರಿಸಿದ ಚಿಮಲ್ಕರ್ ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ನಮ್ಮ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಅಥವಾ ಅಡ್ಡಿಪಡಿಸುತ್ತದೆ ಎಂದು ಹೇಳಿದರು.
ಜಾಮೀನು ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ತೆಗೆದುಕೊಳ್ಳಲು ಯಾವುದೇ ತುರ್ತು ಅಗತ್ಯವಿಲ್ಲ ಎಂದು ಎನ್‌ಸಿಬಿ ಪರ ಹಾಜರಾದ ಸೇತ್ನಾ ನ್ಯಾಯಾಲಯಕ್ಕೆ ತಿಳಿಸಿದರು. ದೇಸಾಯಿಯವರು ಆರ್ಯನ್ ಖಾನ್ ಅವರ ಮನವಿಯನ್ನು ಪ್ರತ್ಯೇಕವಾಗಿ ಆಲಿಸಿ ತೀರ್ಪು ನೀಡುವಂತೆ ಕೋರಿದರು.
ಪ್ರಕರಣದ ಇತರ ನಾಲ್ವರು ಆರೋಪಿಗಳಾದ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ, ನೂಪುರ್ ಸತೇಜಾ ಮತ್ತು ಮೋಹಕ್ ಜೈಸ್ವಾಲ್-ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಬುಧವಾರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆ ಆರಂಭಿಸುವುದಾಗಿ ಕೋರ್ಟ್ ಹೇಳಿದೆ. ಆರ್ಯನ್ ಖಾನ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಎನ್‌ಸಿಬಿ ಈವರೆಗೆ 20 ಜನರನ್ನು ಬಂಧಿಸಿದೆ.