ದೆಹಲಿ : ಜೂನ್ 1ರಂದು ಕೇರಳದಲ್ಲಿ ಪ್ರಾರಂಭವಾಗಬೇಕಿದ್ದ ನೈರುತ್ಯ ಮಾನ್ಸೂನ್ ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮೂರು ದಿನಗಳ ಮುಂಚಿತವಾಗಿಯೇ ಇಂದು ಕೇರಳದಲ್ಲಿ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ನೈರುತ್ಯ ಮಾನ್ಸೂನ್ ಅನ್ನು ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿ ಎಂದು ಪರಿಗಣಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
15 ದಿನಗಳ ಹಿಂದೆ ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸಿದ ಅಸಾನಿ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿ ನೈಋತ್ಯ ಮಾನ್ಸೂನ್ ವಾಡಿಕೆಗಿಂತ ಮುನ್ನವೇ ಮೇ 27ರಂದು ಅಥವಾ ನಾಲ್ಕು ದಿನಗಳ ಹೆಚ್ಚು ಕಡಿಮೆಯ ಅಂತರದಲ್ಲಿ ಕೇರಳಕ್ಕೆ ಪ್ರವೇಶಿಸುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಆದರೆ, ಮುನ್ಸೂಚನೆಯ ಎರಡು ದಿನ ತಡವಾಗಿ ನೈಋತ್ಯ ಮಾನ್ಸೂನ್ ಕೇರಳಕ್ಕೆ ಅಪ್ಪಳಿಸಿದೆ. 2021ರಲ್ಲಿ ನೈಋತ್ಯ ಮಾನ್ಸೂನ್ ಮೇ 31ರಂದು ಪ್ರಾರಂಭವಾಗಿತ್ತು. 2020ರಲ್ಲಿ ಜೂನ್ 5, 2019ರಲ್ಲಿ ಜೂನ್ 6ರಂದು, 2018ರಲ್ಲಿ ಮೇ 29ರಂದೇ ನೈರುತ್ಯ ಮಾನ್ಸೂನ್ ಕೇರಳವನ್ನು ಅಪ್ಪಳಿಸಿತ್ತು.
ಇದನ್ನೂ ಓದಿ: ಮೇ 27ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸುವ ಸಾಧ್ಯತೆ : ಹವಾಮಾನ ಇಲಾಖೆ ಮುನ್ನೆಚ್ಚರಿಕೆ