ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಪ್ರಧಾನಿ ಕೋರಿಕೆಯಂತೆ ಅಲ್ಮೋರಾದ ಬಾಲ್ ಮಿಠಾಯಿಯನ್ನು ಲಕ್ಷ್ಯ ಸೇನ್ ರವಿವಾರ ನೀಡಿದ್ದಾರೆ.
ಥಾಮಸ್ ಮತ್ತು ಉಬರ್ ಕಪ್ ಗೆದ್ದ ಭಾರತೀಯ ತಂಡದೊಂದಿಗೆ ರವಿವಾರ ಪ್ರಧಾನಿ ಸಂವಾದ ನಡೆಸಿದರು. ಈ ವೇಳೆ ಬಾಲ್ ಮಿಠಾಯಿಯನ್ನು ಮೋದಿ ಅವರಿಗೆ ಲಕ್ಷ್ಯ ಸೇನ್ ನೀಡಿದ್ದರು. ಸಿಹಿ ಸ್ವೀಕರಿಸಿದ ಪ್ರಧಾನಿ, ನನಗಾಗಿ ಅಲ್ಮೋರಾದ ಬಾಲ್ ಮಿಠಾಯಿ ತಂದಿದ್ದಕ್ಕಾಗಿ ಲಕ್ಷ್ಯ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಸಣ್ಣ ವಿನಂತಿಯನ್ನು ನೆನಪಿಸಿಕೊಂಡು, ಅದನ್ನು ಪೂರೈಸಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದೂ ಹೇಳಿದ್ದಾರೆ.
ಪ್ರಧಾನಿಯೇ ಬಯಸಿದ್ದರು : ಬಾಲ್ ಮಿಠಾಯಿಯನ್ನು ಲಕ್ಷ್ಯ ಸೇನ್ ಅವರಿಂದ ಸ್ವತಃ ಪ್ರಧಾನಿ ಮೋದಿ ಅವರೇ ಬಯಸಿ ಕೇಳಿದ್ದರು. ಮೇ 15ರಂದು ಥಾಮಸ್ ಕಪ್ ಗೆದ್ದ ಬಳಿಕ ಪ್ರಧಾನಿ ಮೋದಿ ಆಟಗಾರರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಈ ಸಮಯದಲ್ಲಿ ಸಿಹಿ ಖಾದ್ಯ ತಂದು ಕೊಡುವಂತೆ ಲಕ್ಷ್ಯ ಅವರಿಗೆ ಪ್ರಧಾನಿ ಹೇಳಿದ್ದರು.
ಅಂತೆಯೇ ರವಿವಾರ ಸಂವಾದದಲ್ಲಿ ಪ್ರಧಾನಿ ಅವರಿಗೆ ಬಾಲ್ ಮಿಠಾಯಿಯನ್ನು ಕೊಟ್ಟರು. ಈ ವೇಳೆ ಮಾತನಾಡಿರುವ ಲಕ್ಷ್ಯ ಸೇನ್, ಯುವ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಾಗ ನಿಮ್ಮನ್ನು (ಪ್ರಧಾನಿ ಮೋದಿ) ಮೊದಲ ಬಾರಿಗೆ ಭೇಟಿಯಾಗಿದ್ದೆ. ಇಂದು ಎರಡನೇ ಬಾರಿಗೆ ಭೇಟಿಯಾಗುವ ಅವಕಾಶ ಸಿಕ್ಕಿದೆ. ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಾಗಲೆಲ್ಲಾ ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಮೇ 15ರಂದು ನಮ್ಮ ಫೋನ್ ಕರೆ ಬಂದಾಗಲೂ ನಮಗೆಲ್ಲರಿಗೂ ನಿಜವಾಗಿಯೂ ಹೆಮ್ಮೆಯ ಭಾವನೆ ಮೂಡಿತು. ಜೊತೆಗೆ ನಾನು ಇನ್ನಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿ ನಿಮ್ಮನ್ನು ಭೇಟಿ ಮಾಡಲು ಮತ್ತು ನಿಮಗಾಗಿ ಬಾಲ್ ಮಿಠಾಯಿ ತರಲು ಎದುರು ನೋಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
1949ರಲ್ಲಿ ಥಾಮಸ್ ಕಪ್ ಪ್ರಾರಂಭವಾದಾಗಿನಿಂದ ಭಾರತ ತಂಡ ಒಮ್ಮೆಯೂ ಕಪ್ ಗೆದ್ದಿರಲಿಲ್ಲ. ಮೊದಲ ಬಾರಿಗೆ ಮೇ 15ರಂದು ಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. 14 ಬಾರಿಯ ಚಾಂಪಿಯನ್ ಆಗಿದ್ದ ಇಂಡೋನೇಷ್ಯಾ ತಂಡವನ್ನು ಭಾರತ ತಂಡ 3-0ಯಿಂದ ಮಣಿಸಿ ಟ್ರೋಫಿಗೆ ಮುತ್ತಿಕ್ಕಿತ್ತು.
ಇದನ್ನೂ ಓದಿ: ಐತಿಹಾಸಿಕ ಥಾಮಸ್ ಕಪ್ ಗೆದ್ದ ಬ್ಯಾಡ್ಮಿಂಟನ್ ಚಾಂಪಿಯನ್ಗಳೊಂದಿಗೆ ಮೋದಿ ಸಂವಾದ