ಭಾರತ ಹಾಗೂ ನೆರೆ ರಾಷ್ಟ್ರ ಬಾಂಗ್ಲಾದೇಶಗಳ ನಡುವೆ ಮುಕ್ತ ವಾಣಿಜ್ಯ ವಹಿವಾಟು ಒಪ್ಪಂದ ಜಾರಿಗೆ ಬಂದಲ್ಲಿ ಹಾಗೂ ಎರಡು ರಾಷ್ಟ್ರಗಳ ಮಧ್ಯೆ ಸಾರಿಗೆ ವ್ಯವಸ್ಥೆ ಸುಧಾರಿಸಿದಲ್ಲಿ ಎರಡೂ ರಾಷ್ಟ್ರಗಳಿಗೆ ಆರ್ಥಿಕವಾಗಿ ಬಹುದೊಡ್ಡ ಲಾಭವಾಗಲಿದೆ. ಎರಡು ರಾಷ್ಟ್ರಗಳ ಮಧ್ಯೆ ಯಾವೆಲ್ಲ ವ್ಯಾಪಾರ ವಹಿವಾಟು ಅವಕಾಶಗಳಿವೆ, ವಾಣಿಜ್ಯ ಚಟುವಟಿಕೆಗಳಿಗೆ ಇರುವ ತೊಡಕುಗಳೇನು, ಇವುಗಳ ಪರಿಹಾರ ಹೇಗೆ ಎಂಬ ಬಗ್ಗೆ ಒಂದು ಅವಲೋಕನ ಇಲ್ಲಿದೆ...
- ಇಂದು ಭಾರತ - ಬಾಂಗ್ಲಾ ಮಧ್ಯದ ವಾಣಿಜ್ಯ ವಹಿವಾಟು ಬಾಂಗ್ಲಾದ ಒಟ್ಟು ವಹಿವಾಟಿನಲ್ಲಿ ಶೇ 10ರಷ್ಟು ಹಾಗೂ ಭಾರತದ ಒಟ್ಟು ವಿದೇಶ ವಹಿವಾಟಿನಲ್ಲಿ ಕೇವಲ ಶೇ 1 ರಷ್ಟು ಪಾಲು ಹೊಂದಿದೆ.
- ಪೂರ್ವ ಏಷ್ಯಾ ಹಾಗೂ ಉಪ ಆಫ್ರಿಕಾ ಖಂಡದ ದೇಶಗಳೊಂದಿಗೆ ಭಾರತವು ಕ್ರಮವಾಗಿ ಶೇ 50 ಹಾಗೂ ಶೇ 22 ರಷ್ಟು ವಾಣಿಜ್ಯ ವಹಿವಾಟು ನಡೆಸುತ್ತದೆ. ಭಾರತದಲ್ಲಿರುವ ಕಂಪನಿಯೊಂದು ದೂರದ ಬ್ರೆಜಿಲ್ ಅಥವಾ ಜರ್ಮನಿಯೊಂದಿಗೆ ವ್ಯಾಪಾರ ನಡೆಸುವುದು ನೆರೆಯ ಬಾಂಗ್ಲಾದೇಶದೊಂದಿಗೆ ವ್ಯಾಪಾರ ನಡೆಸುವುದಕ್ಕಿಂತಲೂ ಶೇ 15 ರಿಂದ 20 ರಷ್ಟು ಕಡಿಮೆ ವೆಚ್ಚದಾಯಕವಾಗಿದೆ.
- ಅತಿ ಹೆಚ್ಚು ಸುಂಕ, ಉಪ ಸುಂಕ ಮತ್ತು ಸುಂಕ ಇಲ್ಲದಿರುವುದು ಉಭಯ ದೇಶಗಳ ಮಧ್ಯೆ ವ್ಯಾಪಾರ ವಹಿವಾಟಿಗೆ ಪ್ರಮುಖ ಅಡ್ಡಿಯಾಗಿವೆ. ಎರಡೂ ದೇಶಗಳ ಮಧ್ಯದ ಸರಾಸರಿ ವಾಣಿಜ್ಯ ಸುಂಕಗಳು ಜಾಗತಿಕ ಸರಾಸರಿಯ ದುಪ್ಪಟ್ಟಾಗಿವೆ.
- ಎರಡೂ ದೇಶಗಳು ಪರಸ್ಪರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ, ಭಾರತಕ್ಕೆ ಬಾಂಗ್ಲಾದೇಶದ ರಫ್ತುಗಳು ಶೇ 182 ರಷ್ಟು ಹಾಗೂ ಭಾರತದಿಂದ ಬಾಂಗ್ಲಾದೇಶಕ್ಕೆ ರಫ್ತು ಶೇ 126 ರಷ್ಟು ಹೆಚ್ಚಾಗುವ ಅವಕಾಶಗಳಿವೆ.
- ಇನ್ನು ಎರಡೂ ದೇಶಗಳ ಮಧ್ಯೆ ಸಾರಿಗೆ ವ್ಯವಸ್ಥೆ ಸುಧಾರಿಸಿದಲ್ಲಿ ಪರಸ್ಪರ ರಫ್ತು ಪ್ರಮಾಣ ಮತ್ತೂ ಹೆಚ್ಚಳವಾಗಬಹುದು.
- ಭೌಗೋಳಿಕವಾಗಿ ನೋಡುವುದಾದರೆ ಬಾಂಗ್ಲಾದೇಶವು ನೇಪಾಳ, ಭೂತಾನ್ ಮತ್ತು ಇತರ ಪೂರ್ವ ಏಷ್ಯಾ ದೇಶಗಳೊಂದಿಗೆ ಭಾರತದ ಸಂಪರ್ಕ ಕಲ್ಪಿಸಬಹುದಾದ ಆಯಕಟ್ಟಿನ ಸ್ಥಳದಲ್ಲಿದೆ. ಹೀಗಾಗಿ ಬಾಂಗ್ಲಾದೇಶ ಸಹ ಭಾರತದೊಂದಿಗೆ ಈ ಎಲ್ಲ ದೇಶಗಳೊಂದಿಗೆ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಬಹುದು.
- ಭಾರತ ಹಾಗೂ ಬಾಂಗ್ಲಾ ಮಧ್ಯೆ ಪ್ರಸ್ತುತ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ. ಪೆಟ್ರಾಪೋಲ್ ಹಾಗೂ ಬೆನಾಪೋಲ್ ಮೂಲಕ ಗಡಿ ದಾಟಬೇಕಾದರೆ ದಿನಗಳೇ ಬೇಕಾಗುತ್ತವೆ.
- ಸದ್ಯಕ್ಕೆ ಭಾರತದ ಲಾರಿಗಳು ಬಾಂಗ್ಲಾದೊಳಗೆ ಹೋಗಲು ಅನುಮತಿ ಇಲ್ಲ. ಹೀಗಾಗಿ ಈಶಾನ್ಯ ಭಾರತದ ರಾಜ್ಯಗಳು ದೇಶದಿಂದ ಬೇರ್ಪಟ್ಟಿದ್ದು, ಇಲ್ಲಿಗೆ ತಲುಪಬೇಕಾದರೆ 27 ಕಿಮೀ ರಸ್ತೆಯನ್ನು ಸುತ್ತಿ ಬಳಸಿ ಹೋಗಬೇಕಿದೆ.
- ಹೀಗಾಗಿ ಅಗರ್ತಲಾದಿಂದ ಸರಕುಗಳು ಕೋಲ್ಕತ್ತಾಗೆ ಬರಬೇಕಾದರೆ ಸಿಲಿಗುರಿ ಕಾರಿಡಾರ್ ಮೂಲಕ 1600 ಕಿಮೀ ಪಯಣಿಸಬೇಕಾಗುತ್ತದೆ. ಆದರೆ ಇದೇ ಬಾಂಗ್ಲಾದೊಳಕ್ಕೆ ಹಾಯ್ದು ಬಂದರೆ ಕೇವಲ 450 ಕಿಮೀ ಪಯಣಿಸಿ ಕೋಲ್ಕತಾ ತಲುಪಬಹುದು. ಒಂದು ವೇಳೆ ಅಗರ್ತಲಾದಿಂದ ಬಂಗ್ಲಾದೇಶದೊಳಗೆ ನಮ್ಮ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದಲ್ಲಿ, ಬಾಂಗ್ಲಾದೇಶದ ಚತ್ತೋಗ್ರಾಮ ಬಂದರಿಗೆ ಕೇವಲ 80 ಕಿಮೀಗಳಲ್ಲಿ ತಲುಪಬಹುದು. ಈ ಮೂಲಕ ಬಂದರಿನಿಂದ ಭಾರತಕ್ಕೆ ಸರಕು ಸಾಗಿಸಿದಲ್ಲಿ ಶೇ 80 ರಷ್ಟು ಸಾಗಾಣಿಕೆ ವೆಚ್ಚ ಉಳಿಸಬಹುದು.
- ಭಾರತದ ವಾಹನಗಳಿಗೆ ತನ್ನ ದೇಶದ ಮೂಲಕ ಸಂಚರಿಸಲು ಅವಕಾಶ ನೀಡಿದಲ್ಲಿ ಬಾಂಗ್ಲಾದೇಶದ ಬಹುತೇಕ ಎಲ್ಲ ಜಿಲ್ಲೆಗಳಿಗೂ ಆರ್ಥಿಕವಾಗಿ ಭಾರಿ ಲಾಭವಾಗಲಿದೆ. ಜೊತೆಗೆ ಭಾರತದ ರಾಜ್ಯಗಳಾದ ಅಸೋಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ, ಮಹಾರಾಷ್ಟ್ರಗಳಿಗೂ ಆರ್ಥಿಕವಾಗಿ ಲಾಭವಾಗಲಿದೆ.
- 2015ರಲ್ಲಿ ಉಭಯ ದೇಶಗಳ ಮಧ್ಯೆ ಏರ್ಪಟ್ಟ ಒಪ್ಪಂದವನ್ನು ಜಾರಿಗೊಳಿಸಿದಲ್ಲಿ ಎಲ್ಲ ಅಡೆತಡೆಗಳು ನಿವಾರಣೆಯಾಗಬಹುದು.