ನವದೆಹಲಿ: ಛಾವಾಲಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳನ್ನು ಖುಲಾಸೆಗೊಳಿಸಿದ ಸುಪ್ರೀಂ ತೀರ್ಪಿಗೆ ಅಸಮಾಧಾನ ವ್ಯಕ್ತವಾಗಿದೆ. ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್, ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಮತ್ತು ಬೇಲಾ ತ್ರಿವೇದಿ ಅವರಿದ್ದ ಪೀಠ ನೀಡಿದ ಈ ತೀರ್ಪು ತೀವ್ರ ಚರ್ಚೆಗೆ ಕಾರಣವಾಗಿದೆ. ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ನೀಡಿದ್ದ ಮರಣದಂಡನೆಯನ್ನು ರದ್ದುಗೊಳಿಸಿ, ಅಪರಾಧಿಗಳ ಬಿಡುಗಡೆಗೆ ಸೂಚಿಸಿರುವುದು ಪ್ರಶ್ನಾರ್ಥಕವಾಗಿದೆ.
ಮೂವರು ಅತ್ಯಾಚಾರಿಗಳಿಗೆ ದೆಹಲಿ ಹೈಕೋರ್ಟ್ ಮರಣದಂಡನೆ ವಿಧಿಸಿ ಆದೇಶಿಸಿತ್ತು. ಆರೋಪಿಗಳು ಪರಭಕ್ಷಕರಂತೆ ವರ್ತಿಸಿದ್ದಾರೆ. ಇಂಥವರಿಂದ ಸಮಾಜವನ್ನು ರಕ್ಷಿಸಬೇಕು ಎಂದು ಹೇಳಿತ್ತು. ಇದರ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದ ಅಪರಾಧಿಗಳನ್ನು ತ್ರಿಸದಸ್ಯ ನ್ಯಾಯಪೀಠ ಖುಲಾಸೆ ಮಾಡಿದೆ. ಇದರ ವಿರುದ್ಧ ಸಂತ್ರಸ್ತ ಯುವತಿಯ ಕುಟುಂಬಸ್ಥರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಖುಲಾಸೆ ಮಾಡಿದ್ದೇಕೆ?: ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರು ನೀಡಿದ ತೀರ್ಪಿನಂತೆ, ಪ್ರಕರಣದ ವಿಚಾರಣೆಯ ವೇಳೆ ಹಲವಾರು ಲೋಪಗಳನ್ನು ಎಸಗಲಾಗಿದೆ. ಇದರಿಂದಾಗಿ ಅಪರಾಧಿಗಳಿಗೆ "ಅನುಮಾನದ ಮೇಲೆ ಶಿಕ್ಷೆ" ನೀಡುವುದನ್ನು ತಪ್ಪಿಸಲಾಗಿದೆ. ಇದರಿಂದ ಆರೋಪ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
1. ನ್ಯಾಯಯುತ ವಿಚಾರಣೆಯ ಹಕ್ಕು ವಂಚಿತ ಆರೋಪಿ: ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಸತ್ಯವನ್ನು ಹೊರತೆಗೆಯಲು ಸಾಧ್ಯವಾಗಿಲ್ಲ. ಅಲ್ಲದೇ, ನ್ಯಾಯಯುತ ವಿಚಾರಣೆ ನಡೆಸದೇ, ಆರೋಪಿಗಳ ಹಕ್ಕುಗಳನ್ನು ವಂಚಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2. ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲ: ಮೂವರ ವಿರುದ್ಧದ ಆರೋಪಗಳನ್ನು ನಿಖರವಾಗಿ ಸಾಬೀತು ಮಾಡಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಅನುಮಾನದ ಮೇಲೆ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಅತ್ಯಂತ ಘೋರ ಅಪರಾಧದಲ್ಲಿ ಭಾಗಿಯಾಗಿದ್ದರೂ ಅವರನ್ನು ಖುಲಾಸೆ ಮಾಡುವುದು ಬಿಟ್ಟು ನ್ಯಾಯಾಲಯಕ್ಕೆ ಯಾವುದೇ ಪರ್ಯಾಯವಿಲ್ಲ ಎಂದಿದೆ.
3. ಅನುಮಾನದ ಮೇಲೆ ಶಿಕ್ಷೆ ವಿಧಿಸಲಾಗದು: ಯಾವುದೇ ಪ್ರಕರಣದಲ್ಲಿ ಆರೋಪಿಗೆ ಅನುಮಾನದ ಮೇಲೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ನೈತಿಕ ಅಪರಾಧ ಹೊರಿಸಲೂ ಆಗದು. ಇಂತಹ ಘೋರ ಅಪರಾಧದಲ್ಲಿ ಭಾಗಿಯಾದ ಆರೋಪಿಗಳು ಶಿಕ್ಷೆಗೊಳಗಾಗದೆ ಹೋದರೆ ಅಥವಾ ಖುಲಾಸೆಗೊಂಡರೆ, ಸಾಮಾನ್ಯವಾಗಿ ಸಮಾಜಕ್ಕೆ ಮತ್ತು ನಿರ್ದಿಷ್ಟವಾಗಿ ಸಂತ್ರಸ್ತರ ಕುಟುಂಬಕ್ಕೆ ಸಂಕಟ ಮತ್ತು ಹತಾಶೆ ಉಂಟಾಗಬಹುದು ಎಂಬುದು ಪೀಠದ ಗಮನಕ್ಕಿದೆ ಎಂದಿದೆ.
ಬಾಹ್ಯ ಒತ್ತಡ, ಪ್ರಭಾವಕ್ಕೆ ಒಳಗಾಗದೇ ಪ್ರಕರಣದಲ್ಲಿ ನ್ಯಾಯಾಲಯಗಳು ಕಟ್ಟುನಿಟ್ಟಾಗಿ ನಿರ್ಧರಿಸಬೇಕು. ವಿಚಾರಣೆಯ ವೇಳೆ ಪರಿಗಣಿಸಲಾದ 49 ಸಾಕ್ಷಿಗಳ ಪೈಕಿ 10 ಸಾಕ್ಷಿಗಳನ್ನು ಅಡ್ಡ ಪರೀಕ್ಷೆ ಮಾಡಲಾಗಿಲ್ಲ. ಇತರ ಪ್ರಮುಖ ಸಾಕ್ಷಿಗಳನ್ನು ಪ್ರತಿವಾದಿ ವಕೀಲರು ಸಮರ್ಪಕವಾಗಿ ವಿಚಾರಣೆ ನಡೆಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
5. ಆರೋಪಿಗಳನ್ನು ಸಂಪೂರ್ಣವಾಗಿ ಗುರುತಿಸಲಾಗಿಲ್ಲ: ಆರೋಪಿಗಳ ಪತ್ತೆಗೆ ಪರೇಡ್ ನಡೆಸಲಾಗಿಲ್ಲ. ಸಾಕ್ಷಿಗಳು ಈ ಆರೋಪಿಗಳು ನಿಖರವಾಗಿ ಪತ್ತೆ ಮಾಡಿಲ್ಲ ಎಂಬುದು ಪೀಠದ ಗಮನಕ್ಕೆ ಬಂದಿದೆ. ಆದ್ದರಿಂದ, ಆರೋಪಿಯ ನಿಖರ ಗುರುರು ಪತ್ತೆಯಾಗದೇ, ಸಾಕ್ಷ್ಯಾಧಾರಗಳು ಸಾಬೀತಾಗದಿರುವುದು ತನಿಖೆಯ ವೈಫಲ್ಯ ಎಂದು ಕೋರ್ಟ್ ಹೇಳಿದೆ.
ಓದಿ: ಛಾವಾಲಾ ರೇಪಿಸ್ಟ್ಗಳ ಖುಲಾಸೆ: ಸಂತ್ರಸ್ತೆ ಕುಟುಂಬ ಬೇಸರ, ಮೇಲ್ಮನವಿ ಸಲ್ಲಿಕೆಗೆ ಸಜ್ಜು