ಪುಲ್ವಾಮಾ(ಜಮ್ಮು ಕಾಶ್ಮೀರ): ಪುಲ್ವಾಮಾ ಜಿಲ್ಲೆಯ ಕಸ್ಬಯಾರ್‌ನ ರಾಜ್‌ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಎನ್‌ಕೌಂಟರ್ ನಡೆದಿದೆ. ಈ ವೇಳೆ, ಇಬ್ಬರು ಜೈಷ್-ಇ-ಮೊಹಮದ್ ಭಯೋತ್ಪಾದಕ ಸಂಘಟನೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಕಸ್ಬಯಾರ್ನಲ್ಲಿ ಭಯೋತ್ಪಾದಕರಿರುವ ಬಗ್ಗೆ ನಿಖರ ಮಾಹಿತಿ ಪಡೆದ ಜಮ್ಮು ಕಾಶ್ಮೀರ ಪೊಲೀಸ್, ಮಿಲಿಟರಿ ಮತ್ತು ಸಿಆರ್‌ಪಿಎಫ್ ಜಂಟಿ ತಂಡವು ಕಾರ್ಯಾಚರಣೆ ನಡೆಸಿದ್ದು, ಮೊದಲಿಗೆ ಭಯೋತ್ಪಾದಕರಿಗೆ ಶರಣಾಗಲು ಸೂಚನೆ ನೀಡಲಾಗಿತ್ತು.
ಸೇನೆಯ ಮನವಿಗೆ ಸ್ಪಂದಿಸದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸೇನೆಯೂ ಪ್ರತಿದಾಳಿ ನಡೆಸಿತು. ಈ ವೇಳೆ ಜೈಷ್-ಎ-ಮೊಹಮದ್ನ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎನ್ಕೌಂಟರ್ನಲ್ಲಿ ಜೈಷ್-ಇ-ಮೊಹಮದ್ ಉಗ್ರಗಾಮಿ ಸಂಘಟನೆಯ ಐಇಡಿ ಪರಿಣಿತನಾದ ಯಾಸಿರ್ ಪರ್ರೆ ಮತ್ತು ವಿದೇಶಿ ಭಯೋತ್ಪಾದಕನಾದ ಫುರ್ಖಾನ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಇಬ್ಬರೂ ಹಲವಾರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರಿಂದ ಹಲವು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಾಶ್ಮೀರದ ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಅಮೆರಿಕ: ಶಾಲೆಯಲ್ಲಿ 15 ವರ್ಷದ ಬಾಲಕನಿಂದ ಗುಂಡಿನ ದಾಳಿ, ಮೂವರು ಸಾವು