ಲಖೀಮ್ಪುರ್ ಖೇರಿ: ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸಲು ಪಣ ತೊಟ್ಟಿರುವ ಎಐಸಿಸಿ ಪ್ರಧಾನ ಕಾರ್ಯಾದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಇಂದು ಬೆಳಗ್ಗೆ ಲಖೀಮ್ಪುರ್ ಖೇರಿ ಜಿಲ್ಲೆಗೆ ಆಗಮಿಸಿದ ಅವರು, ಇತ್ತೀಚೆಗೆ ನಾಮಪತ್ರ ಸಲ್ಲಿಸಲು ತೆರಳುವಾಗ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಪಸ್ಗವಾನ್ ಬ್ಲಾಕ್ನ ಜಿಲ್ಲಾ ಪಂಚಾಯತ್ ಸ್ವತಂತ್ರ ಮಹಿಳಾ ಅಭ್ಯರ್ಥಿ ಭೇಟಿಯಾಗಿದ್ದಾರೆ. ಜಿಲ್ಲೆಯ ಸೆಮ್ರಾ ಘಾಟ್‌ನಲ್ಲಿ ಸಂತ್ರಸ್ತ ಮಹಿಳೆಯ ಮನೆ ಇದ್ದು, ಪ್ರಿಯಾಂಕಾ ಗಾಂಧಿ ಭೇಟಿ ಹಿನ್ನೆಲೆ, ಮಹಿಳೆಯ ಮನೆಗೆ ಭದ್ರತೆ ಹೆಚ್ಚಿಸಲಾಗಿತ್ತು.
ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಕಾಂಗ್ರೆಸ್ ಮಹಿಳಾ ನಾಯಕಿ ಆರಾಧನಾ ಮಿಶ್ರಾ ಸಾಥ್ ನೀಡಿದರು.
ಓದಿ : ಪೆಟ್ರೋಲ್, ಡೀಸೆಲ್ ಬೆಲೆ ದೇಸಿ ತುಪ್ಪಕ್ಕಿಂತ ಹೆಚ್ಚಳವಾಗಿದೆ: ಸಚಿನ್ ಪೈಲಟ್
ಮುಂದಿನ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಬಲವರ್ಧನೆಗೆ ಪ್ರಿಯಾಂಕಾ ಗಾಂಧಿ ಯೋಜನೆ ರೂಪಿಸಿದ್ದು, ಶುಕ್ರವಾರ ಲಖೌನ್ನ ಕಾಂಗ್ರೆಸ್ ಕಚೇರಿಯಲ್ಲಿ ಯುಪಿ ಕೈ ನಾಯಕರ ಸಭೆ ನಡೆಸಿದ್ದಾರೆ. ಸುಮಾರು ನಾಲ್ಕೂವರೆ ಗಂಟೆ ನಡೆದ ಸಭೆಯಲ್ಲಿ ಪಕ್ಷದ ಮುಖಂಡರೊಂದಿಗೆ ಪ್ರಿಯಾಂಕಾ ಮುಂದಿನ ಚುನಾವಣೆಯ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಪಕ್ಷ ಸಂಘಟನೆಗೆ ಶ್ರಮಿಸುವಂತೆ ಮುಖಂಡರಿಗೆ ಕರೆ ನೀಡಿರುವ ಅವರು, ಯೋಗಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.