ಲಖನೌ (ಉತ್ತರ ಪ್ರದೇಶ): ಎರಡೂ ಕುಟುಂಬಗಳ ಸಮ್ಮತಿ - ಸಮ್ಮುಖದೊಂದಿಗೆ ನಡೆಯುತ್ತಿದ್ದ ಅಂತರ್ ಧರ್ಮೀಯ ವಿವಾಹವೊಂದನ್ನು ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ. ಈ ಮೂಲಕ 'ಮತಾಂತರ ನಿಷೇಧ - 2020'ರ ಕಾನೂನಿನ ವಿರುದ್ಧ ದನಿ ಎತ್ತಿದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಲಖನೌ ಮೂಲದ ಹಿಂದೂ ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಲು ಬಯಸಿದ್ದಳು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಬುಧವಾರ ರಾತ್ರಿ ಮದುವೆ ನಿಶ್ಚಯವಾಗಿತ್ತು. ಎರಡೂ ಧರ್ಮದ ಆಚರಣೆಗಳ ಪ್ರಕಾರ ಮದುವೆ ನಡೆಯುತ್ತಿತ್ತು. ಆದರೆ, ಮಧ್ಯಪ್ರವೇಶಿಸಿದ ಪೊಲೀಸರು ಮದುವೆ ನಿಲ್ಲಿಸಿದ್ದಾರೆ.
ಮದುವೆ ನಡೆಯಬೇಕೇ, ಬೇಡವೇ ಎಂಬುದನ್ನ ಈಗ ಪೊಲೀಸರು ನಿರ್ಧರಿಸುತ್ತಾರೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ವಿವಾಹ ನಡೆಯುತ್ತಿದ್ದರೂ ಪೊಲೀಸರು ವಿರೋಧಿಸಿದ್ದಾರೆ. ಅತಿಥಿಗಳು ಊಟ ಮಾಡದೇ ಹಿಂದಿರುಗಿದ್ದಾರೆ. ಸ್ವತಂತ್ರ ಭಾರತದಲ್ಲಿ ಇಂತಹ ಘಟನೆ ನಡೆಯುತ್ತದೆ ಊಹಿಸಿರಲಿಲ್ಲ ಎಂದು ವಧು - ವರರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮೊದಲ 'ಲವ್ ಜಿಹಾದ್' ಕೇಸ್ ದಾಖಲು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ, ಇತ್ತೀಚೆಗೆ ಜಾರಿಗೆ ಬಂದ ಮತಾಂತರ ನಿಷೇಧ ಕಾನೂನಿನಡಿ ನಾವು ಮದುವೆ ತಡೆದಿದ್ದೇವೆ. ಈ ಜೋಡಿಗೆ ಎರಡೂ ಕುಟುಂಬಗಳ ಒಪ್ಪಿಗೆ ಇದ್ದುದರಿಂದ ಈ ವಿಷಯದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದರೆ ಮಾತ್ರ ಅವರು ವಿವಾಹವಾಗಬಹುದು ಎಂದು ಹೇಳಿದ್ದಾರೆ. ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಬ್ರಿಜೇಶ್ ಶುಕ್ಲಾ ಈ ವಿವಾಹದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು ಎಂದು ಹೇಳಲಾಗಿದೆ.
ಉತ್ತರ ಪ್ರದೇಶ ಸರ್ಕಾರ ನವೆಂಬರ್ 24ರಂದು 'ವಿಧಿ ವಿರುಧ್ ಧರ್ಮಾಂತರನ್-2020' ಎಂಬ ಹೆಸರಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಲವ್ ಜಿಹಾದ್ ಎಂಬುದು ಕಾನೂನು ಬಾಹಿರ ಮತಾಂತರ ಎಂದು ಈ ಸುಗ್ರೀವಾಜ್ಞೆಯಲ್ಲಿ ಘೋಷಿಸಲಾಗಿತ್ತು.
ಈ ಹೊಸ ಕಾನೂನ ಅಡಿ ಕೇವಲ ವಿವಾಹಕ್ಕೋಸ್ಕರ ಬಲವಂತದ ಮತಾಂತರ ನಡೆಸಿದ ಆರೋಪಿಗಳಿಗೆ 15 ಸಾವಿರ ರೂ.ಗಳ ದಂಡದೊಂದಿಗೆ 1-5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎಸ್‌ಸಿ/ಎಸ್‌ಟಿ ಸಮುದಾಯದ ಅಪ್ರಾಪ್ತರು ಮತ್ತು ಮಹಿಳೆಯರ ಮತಾಂತರಕ್ಕೆ 25 ಸಾವಿರ ರೂ.ಗಳ ದಂಡದೊಂದಿಗೆ 3-10 ವರ್ಷಗಳ ಜೈಲು ಶಿಕ್ಷೆ ಇರುತ್ತದೆ.