ಪಾಟ್ನಾ(ಬಿಹಾರ): ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಳೆದ ಕೆಲವು ವಾರಗಳಿಂದ 300ಕ್ಕೂ ಹೆಚ್ಚು ಜನರು ನಿಗೂಢ ಕಾಯಿಲೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಪಟ್ವಾ ಟೋಲಿ ಗ್ರಾಮದಲ್ಲಿ ಅನೇಕ ಜನರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದು, ವೈದ್ಯರು ಈ ರೋಗ ಯಾವುದೆಂಬುದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ.
ಆರಂಭದಲ್ಲಿ ರೋಗಿಗಳು ಎರಡು ಮೂರು ದಿನಗಳಿಂದ ಜ್ವರದಿಂದ ಬಳಲುತ್ತಾರೆ. ನಂತರ, ಕೀಲು ನೋವು ದೀರ್ಘಕಾಲ ಉಳಿಯುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ರೋಗಿಗಳು ಜ್ವರದಿಂದ ಚೇತರಿಸಿಕೊಳ್ಳಬಹುದು. ಆದರೆ, ಕೀಲುಗಳಲ್ಲಿನ ನೋವಿನಿಂದ ಅವರು ಸರಿಯಾದ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು "ಲಾಂಗ್ಡಾ ಜ್ವರ" ಎಂದು ಕರೆಯುತ್ತಿದ್ದಾರೆ.
ಜಿಲ್ಲಾ ಸಿವಿಲ್ ಸರ್ಜನ್ ಮಾಹಿತಿ: ಜಿಲ್ಲಾ ಸಿವಿಲ್ ಸರ್ಜನ್ ಡಾ.ರಂಜನ್ ಕುಮಾರ್ ಸಿಂಗ್, ಈ ಕಾಯಿಲೆಗೆ ಚಿಕಿತ್ಸೆ ನೀಡಲು ಪಟ್ವಾ ಟೋಲಿಯಲ್ಲಿ ವೈದ್ಯಕೀಯ ತಂಡವನ್ನು ನಿಯೋಜಿಸಿದ್ದಾರೆ. ''ಈ ರೋಗದ ಲಕ್ಷಣಗಳು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾವನ್ನು ಹೋಲುತ್ತವೆ. ಆದ್ದರಿಂದ ನಾವು ರೋಗಿಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡು ಸಿಬಿಸಿ ಪರೀಕ್ಷೆಗಾಗಿ ಪಾಟ್ನಾದ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಪರೀಕ್ಷೆಯ ನಂತರ ರೋಗದ ಸ್ವರೂಪ ತಿಳಿಯಲಿದೆ. 5 ವರ್ಷದಿಂದ 80 ವರ್ಷದವರೆಗಿನ ಎಲ್ಲಾ ವಯೋಮಾನದ ರೋಗಿಗಳಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ'' ಎಂದು ತಿಳಿಸಿದರು.
ಇತ್ತೀಚಿನ ಪ್ರಕರಣ-ನೂರಾರು ವಿದ್ಯಾರ್ಥಿನಿಯರಲ್ಲಿ ನಿಗೂಢ ರೋಗ ಲಕ್ಷಣ: ಪೂರ್ವ ಆಫ್ರಿಕಾದ ಕೀನ್ಯಾದಲ್ಲಿ ವಿಚಿತ್ರ ಕಾಯಿಲೆಯೊಂದು ಮಕ್ಕಳಿಗೆ ಇತ್ತೀಚಿಗೆ ಕಾಡುತ್ತಿದೆ. ಸೇಂಟ್ ತೆರೇಸಾ ಎರಿಗಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ನೂರಾರು ವಿದ್ಯಾರ್ಥಿನಿಯರಲ್ಲಿ ನಿಗೂಢ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಶಾಲೆಯ 90ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾರ್ಶ್ವವಾಯುಗೆ ಒಳಗಾಗಿರುವುದು ಎಲ್ಲರಲ್ಲಿಯೂ ಭೀತಿಯನ್ನು ಉಂಟಾಗಿತ್ತು.
ಆಫ್ರಿಕಾ ಖಂಡದಾದ್ಯಂತ ಈ ನಿಗೂಢ ಕಾಯಿಲೆಯು ಭಯದ ವಾತಾವರಣ ಮೂಡಿಸಿತ್ತು. ಕೀನ್ಯಾ ದೇಶದ ಆರೋಗ್ಯ ಇಲಾಖೆ ಅಧಿಕಾರಿಗಳು ಈ ವಿಚಿತ್ರ ರೋಗದ ಬಗ್ಗೆ ತನಿಖೆಯನ್ನೂ ಆರಂಭಿಸಿದ್ದರು. ಆರಂಭದಲ್ಲಿ ವಿದ್ಯಾರ್ಥಿನಿಯರು ಅಸ್ವಸ್ಥತೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಬಳಿಕ ರೋಗ ಲಕ್ಷಣಗಳು ಒಂದೊಂದಾಗಿಯೇ ಕಾಣಿಸಿಕೊಂಡಿದ್ದವು. ಇದಾದ ಬಳಿಕ ವಿದ್ಯಾರ್ಥಿನಿಯರು ಪಾರ್ಶ್ವವಾಯುಗೆ ತುತ್ತಾಗುತ್ತಿದ್ದರು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಗ್ರಾಮದಲ್ಲಿ ವ್ಯಾಪಿಸುತ್ತಿದೆ ನಿಗೂಢ ಕಾಯಿಲೆ.. ಎಲ್ಲಂದರಲ್ಲೇ ತಲೆ ತಿರುಗಿ ಬೀಳುತ್ತಿರುವ ಜನ!