ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪ್ರಕರಣದ ಆರೋಪಿ ಮಹೇಶ್ ಕುಮಾವತ್ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹೇಶ್ ಕುಮಾವತ್ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಆರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರು ಆರೋಪಿ ಕುಮಾವತ್ ಪೊಲೀಸ್ ಕಸ್ಟಡಿಯನ್ನು ಜನವರಿ 5ರವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ. ಇದೇ ವೇಳೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಆರೋಪಿಯನ್ನು ಇನ್ನಷ್ಟು ವಿಚಾರಣೆ ನಡೆಸುವ ಅಗತ್ಯ ಇದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೂ ಮುನ್ನ ವಾದ ಮಂಡಿಸಿದ್ದ ಪ್ರಾಸಿಕ್ಯೂಟರ್, ಆರೋಪಿಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಮತ್ತು ಈ ಮೂಲಕ ತಮ್ಮ ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸಬೇಕೆಂಬ ಉದ್ದೇಶವನ್ನು ಹೊಂದಿದ್ದಿರಬಹುದು. ಈ ಸಂಬಂಧ ಆರೋಪಿಗಳ ಕಸ್ಟಡಿಯನ್ನು ವಿಸ್ತರಿಸಬೇಕೆಂದು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಇದರಿಂದ ಆರೋಪಿಗಳ ಕೃತ್ಯದ ಹಿಂದಿನ ಉದ್ದೇಶ, ಇವರಿಗೆಲ್ಲ ಯಾರೊಂದಿಗೆ ಸಂಬಂಧ ಇದೆ. ಇತ ವಿಚಾರಗಳ ಬಗ್ಗೆಯೂ ಪತ್ತೆ ಮಾಡಲು ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದರು.
ಕಳೆದ ಡಿಸೆಂಬರ್ 13ರಂದು ಲೋಕಸಭೆಯ ಕಲಾಪ ಸಂದರ್ಭ ಇಬ್ಬರು ದುಷ್ಕರ್ಮಿಗಳು ಸಂಸತ್ಗೆ ನುಗ್ಗಿ ಸ್ಮೋಕ್ ಗ್ಯಾಸ್ ಸಿಡಿಸಿದ್ದರು. ಈ ಸಂಬಂಧ ಒಟ್ಟು 7 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ. ದೆಹಲಿ ಪೊಲೀಸರ ಮಾಹಿತಿ ಪ್ರಕಾರ, ಭದ್ರತಾ ಲೋಪ ಪ್ರಕರಣ ಸಂಬಂಧ ಕುಮಾವತ್ ಮತ್ತು ಪ್ರಕರಣದ ಮತ್ತೋರ್ವ ಆರೋಪಿ ಲಲಿತ್ ಝಾ ಅವರು ಠಾಣೆಗೆ ಬಂದು ಶರಣಾಗಿದ್ದರು. ಬಳಿಕ ದೆಹಲಿ ಪೊಲೀಸರು ಈ ಇಬ್ಬರನ್ನು ವಿಶೇಷ ತನಿಖಾ ದಳಕ್ಕೆ ಹಸ್ತಾಂತರಿಸಿದ್ದರು. ಕಳೆದ ಕೆಲವು ದಿನಗಳಿಂದ ಆರೋಪಿ ಮಹೇಶ್ ಕುಮಾವತ್ ವಿಚಾರಣೆ ನಡೆಸಲಾಗುತ್ತಿದೆ. ಕುಮಾವತ್ ಈಗಾಗಲೇ ಡಿಲಿಟ್ ಆಗಿರುವ ಭಗತ್ ಸಿಂಗ್ ಫ್ಯಾನ್ ಕ್ಲಬ್ನ ಸದಸ್ಯನಾಗಿದ್ದನು. ಕುಮಾವತ್ನನ್ನು ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ನ್ಯಾಯಾಲಯವು ಪ್ರಕರಣ ಆರೋಪಿ ಮಹೇಶ್ ಕುಮಾವತ್ ಸೇರಿ ಇತರ ಆರೋಪಿಗಳಾದ ಮನೋರಂಜನ್ ಡಿ., ಸಾಗರ್ ಶರ್ಮಾ, ಅಮೊಲ್ ಧನರಾಜ್ ಶಿಂಧೆ, ನೀಲಂ ದೇವಿ ಹಾಗೂ ಪ್ರಮುಖ ಆರೋಪಿ ಲಲಿತ್ ಝಾ ಅವರ ಪೊಲೀಸ್ ಕಸ್ಟಡಿಯನ್ನು ಜನವರಿ 5ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ : ಮೈಸೂರು: ಎರಡನೇ ದಿನವೂ ದೆಹಲಿ ಪೊಲೀಸರಿಂದ ಮನೋರಂಜನ್ ಪೋಷಕರ ವಿಚಾರಣೆ - ವೀಡಿಯೋ