ಹೈದರಾಬಾದ್ : ಪಾಕಿಸ್ತಾನದಲ್ಲಿ ಭಾರಿ ಭಯೋತ್ಪಾದಕ ದಾಳಿ ನಡೆದಿದೆ. ನೆರೆಯ ದೇಶದ ಪಂಜಾಬ್ ಪ್ರಾಂತ್ಯದ ಮಿಯಾನ್‌ವಾಲಿ ತರಬೇತಿ ವಾಯುನೆಲೆ ಮೇಲೆ ಇಂದು ಬೆಳಗ್ಗೆ ಆರು ಉಗ್ರರು ದಾಳಿ ನಡೆಸಿದ್ದಾರೆ. ದಾಳಿಕೋರರು ವಾಯುಪಡೆ ನೆಲೆ ಪ್ರವೇಶಿಸುವ ಮುನ್ನವೇ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಹೌದು, ಪಾಕಿಸ್ತಾನದ ಮಿಯಾನ್‌ವಾಲಿಯಲ್ಲಿರುವ ವಾಯುಪಡೆ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ ನಡೆದಿದೆ. ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅಪರಿಚಿತ ಬಂದೂಕುಧಾರಿಗಳು ವಾಯುಪಡೆ ತರಬೇತಿ ಕೇಂದ್ರಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಮೂರು ಯುದ್ಧ ವಿಮಾನಗಳನ್ನು ಸ್ಫೋಟಿಸಿದ್ದು, ಹಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ ಹೊತ್ತುಕೊಂಡಿದೆ. ಮೂವರು ಭಯೋತ್ಪಾದಕರನ್ನು ಕೊಂದಿದ್ದೇವೆ ಮತ್ತು ಉಳಿದ ಮೂವರನ್ನು ತಟಸ್ಥಗೊಳಿಸಿದ್ದೇವೆ ಎಂದು ಪಾಕಿಸ್ತಾನಿ ವಾಯುಪಡೆ ಹೇಳಿಕೊಂಡಿದೆ.
ಮೂವರು ಉಗ್ರರನ್ನು ಹತ್ಯೆಗೈದ ಸೇನೆ : ಅಪರಿಚಿತ ಬಂದೂಕುಧಾರಿಗಳ ವಿರುದ್ಧ ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆಗೈದಿರುವುದಾಗಿ ಪಾಕಿಸ್ತಾನ ವಾಯುಪಡೆ (ಪಿಎಎಫ್) ತಿಳಿಸಿದೆ. ಐದರಿಂದ ಆರು ಮಂದಿ ಭಾರಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಮುಂಜಾನೆ ದಾಳಿ ನಡೆಸಿದ್ದು, ಶೂಟೌಟ್‌ಗೆ ಕಾರಣವಾಯಿತು. ಭಯೋತ್ಪಾದಕರು ವಾಯುನೆಲೆ ಪ್ರವೇಶಿಸುವ ಮೊದಲೇ ಅವರ ದಾಳಿಯನ್ನು ವಿಫಲಗೊಳಿಸಲಾಯಿತು ಎಂದು ಹೇಳಿದೆ. ಇನ್ನೊಂದೆಡೆ, ದಾಳಿಯ ಕುರಿತಾದ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ : ಒತ್ತೆಯಾಳಾಗಿದ್ದ ಯೋಧೆಯನ್ನು ರಕ್ಷಿಸಿದ ಇಸ್ರೇಲ್ ಸೇನೆ : ಕದನ ವಿರಾಮ ತಿರಸ್ಕರಿಸಿದ ಪ್ರಧಾನಿ ನೆತನ್ಯಾಹು
ಇನ್ನು ಕಳೆದ ವಾರದ ಆರಂಭದಲ್ಲಿ ಭಯೋತ್ಪಾದಕರು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ (ಕೆಪಿ) ನಲ್ಲಿ ಭದ್ರತಾ ಪಡೆಗಳ ಮೇಲೆ ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದರು ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ