ವಾರಣಾಸಿ: ಹಲವಾರು ವರ್ಷಗಳ ಸತತ ಪ್ರಯತ್ನದ ಬಳಿಕ ಗಂಗಾ ನದಿ ನೀರಿನ ಗುಣಮಟ್ಟ ಮತ್ತು ಆಮ್ಲಜನಕದ ಪ್ರಮಾಣ ಹೆಚ್ಚಾಗಿದೆ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯು ಇತ್ತೀಚೆಗೆ ಗಂಗಾ ನದಿ ನೀರಿನ ಮಾದರಿಗಳನ್ನು ಪರೀಕ್ಷಿಸಿದ ಬಳಿಕ ಈ ವರದಿ ನೀಡಿದೆ.
30 ಚರಂಡಿಗಳ ನೀರು ನೇರವಾಗಿ ಗಂಗಾನದಿ ಸೇರುತ್ತಿತ್ತು. ಆದರೆ, ಈಗ ವಿವಿಧ ಸ್ಥಳಗಳಲ್ಲಿ ಎಂಎಲ್ಡಿ ಹಾಗೂ ಇತರೆ ಸಣ್ಣ ಆಧುನಿಕ ಎಸ್ಟಿಪಿ ಘಟಕಗಳನ್ನು ನಿರ್ಮಿಸಲಾಗಿದೆ. ಜತೆಗೆ 19 ಚರಂಡಿಗಳನ್ನೂ ಮುಚ್ಚಲಾಗಿದೆ. ಜನವರಿ ಮೊದಲ ವಾರದಿಂದ ಜನವರಿ 29ರವರೆಗಿನ ಡೇಟಾವನ್ನು ಗಮನಿಸಿದರೆ ಗಂಗಾ ನೀರಿನ ಗುಣಮಟ್ಟ ನಿರಂತರವಾಗಿ ಸುಧಾರಿಸುತ್ತಿದೆ ಎಂದು ಗಂಗಾ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕಾಳಿಕಾ ಸಿಂಗ್ ಹೇಳಿದ್ದಾರೆ. ಜೊತೆಗೆ ಆಮ್ಲಜನಕದ ಪ್ರಮಾಣವೂ ಹೆಚ್ಚಾಗಿರೋದು ಗಮನಾರ್ಹ.
ಯಾವುದೇ ನದಿ ಅಥವಾ ಸರೋವರದಲ್ಲಿ ಆಮ್ಲಜನಕದ ಮಟ್ಟವು 6 ಮಿಲಿ ಗ್ರಾಂ ಅಥವಾ ಹೆಚ್ಚಿರಬೇಕು. ಆಮ್ಲಜನಕ ಕಡಿಮೆಯಾದರೆ ಪರಿಸ್ಥಿತಿ ಆತಂಕಕಾರಿಯಾಗುತ್ತದೆ. ಪ್ರಸ್ತುತ ಗಂಗಾ ನದಿಯಲ್ಲಿ 9 ಮಿಲಿ ಗ್ರಾಂ ಆಮ್ಲಜನಕವಿದೆ.