ನವದೆಹಲಿ: ಪಂಜಾಬ್‌ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂಬ ಸುದ್ದಿ ಮಹತ್ವದ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿನಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬುದನ್ನು ಪೊಲೀಸರು ನಿರಾಕರಿಸಿದ್ದಾರೆ. ಆರೋಪಿ ವಿದ್ಯಾರ್ಥಿನಿ ತನ್ನ ವಿಡಿಯೋವನ್ನು ಮಾತ್ರ ಗೆಳೆಯನಿಗೆ ಕಳುಹಿಸಿದ್ದಾಳೆ. ಬೇರೆ ಯಾವ ವಿಡಿಯೋ ಕೂಡ ಹೊರಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹುಡುಗಿಯರು ಸ್ನಾನ ಮಾಡುತ್ತಿರುವ ವೇಳೆ ಇನ್ನೊಬ್ಬ ವಿದ್ಯಾರ್ಥಿನಿ ಇದನ್ನು ವಿಡಿಯೋ ಮಾಡಿ ಆತನ ಸ್ನೇಹಿತರಿಗೆ ಕಳುಹಿಸಿದ್ದಾಳೆ ಎಂಬುದು ದೊಡ್ಡ ಪ್ರತಿಭಟನೆಗೆ ಕಾರಣವಾಗಿತ್ತು. ಬಳಿಕ ಆರೋಪಿ ವಿದ್ಯಾರ್ಥಿನಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು, ಯಾವುದೇ ವಿಡಿಯೋವನ್ನು ಹುಡುಗಿ ಹರಿಬಿಟ್ಟಿಲ್ಲ. ಈ ಮೊದಲು ಕೇಳಿಬಂದ ಎಲ್ಲ ಆರೋಪಗಳು ಕೇವಲ ವದಂತಿ ಎಂದು ತಿಳಿಸಿದ್ದಾರೆ.
ಆರೋಪಿ ವಿದ್ಯಾರ್ಥಿನಿ ಹಿಮಾಚಲ ಪ್ರದೇಶದ ತನ್ನ ಗೆಳೆಯನಿಗೆ ತನ್ನದೇ ವಿಡಿಯೋವನ್ನು ಕಳುಹಿಸಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಎಂದು ಮೊಹಾಲಿ ಎಸ್ಪಿ ವಿವೇಕ್ ಶೀಲ್ ಸೋನಿ ಮಾಹಿತಿ ನೀಡಿದರು.
ಆಕ್ಷೇಪಾರ್ಹ ವಿಡಿಯೋ ಸೋರಿಕೆಯಾದ ಸುದ್ದಿ ಕೇಳಿ ಬಂದ ನಂತರ ಕೆಲವು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಮುಂದಾಗಿದ್ದರು ಎಂಬುದೂ ಸುಳ್ಳು. ಆರೋಪಿಯಿಂದ ವಿಡಿಯೋ ಪಡೆದುಕೊಂಡ ವ್ಯಕ್ತಿಯನ್ನು ಬಂಧಿಸಲು ಪೊಲೀಸ್ ತಂಡ ಶಿಮ್ಲಾಕ್ಕೆ ತೆರಳಿದೆ. ಇದುವರೆಗೆ ನಡೆಸಿದ ತನಿಖೆಯಲ್ಲಿ ಆರೋಪಿತೆ ಒಂದೇ ಒಂದು ವಿಡಿಯೋವನ್ನು ಕಳುಹಿಸಿದ್ದಾಳೆ. ಆಕೆ ಬೇರೆ ವಿದ್ಯಾರ್ಥಿನಿಯರ ವಿಡಿಯೋವನ್ನು ರೆಕಾರ್ಡ್ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಓದಿ: ಚಂಡೀಗಢ ವಿಶ್ವವಿದ್ಯಾಲಯದ ವಿಡಿಯೋ ವೈರಲ್ ಮಾಡಿದ ಯುವತಿ ಫ್ರೆಂಡ್ ಅರೆಸ್ಟ್
ವಿಶ್ವವಿದ್ಯಾನಿಲಯದಿಂದ ಹಲವು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕೂಗಾಡಿದ ವೇಳೆ ಕುಸಿದು ಬಿದ್ದಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರೂ ಆತ್ಮಹತ್ಯೆಗೆ ಯುತ್ನಿಸಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
60 ಎಂಎಂಎಸ್ ವಿಡಿಯೋಗಳು ನಿರಾಧಾರ: ವಿದ್ಯಾರ್ಥಿನಿಯರ 60 ಆಕ್ಷೇಪಾರ್ಹ ಎಂಎಂಎಸ್ ವಿಡಿಯೋಗಳು ಹೊರಬಂದಿವೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದೆ. ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಹಂಚಿಕೊಂಡ ವೈಯಕ್ತಿಕ ವಿಡಿಯೋ ಹೊರತುಪಡಿಸಿ ಬೇರೆ ಯಾವುದೇ ಆಕ್ಷೇಪಾರ್ಹ ವಿಡಿಯೋಗಳು ಲೀಕ್ ಆಗಿಲ್ಲ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ತನಿಖೆಯನ್ನು ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಜಪ್ತಿ ಮಾಡಲಾದ ಮೊಬೈಲ್ಗಳು ಮತ್ತು ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಚಂಡೀಗಢ ವಿವಿ ಕುಲಪತಿ ಡಾ. ಆರ್.ಎಸ್. ಬಾವಾ ತಿಳಿಸಿದ್ದಾರೆ.
ಓದಿ: ನಮ್ಮ ಸಹೋದರಿಯರೊಂದಿಗೆ ನಿಲ್ಲೋಣ, ಎಲ್ಲರೂ ಜವಾಬ್ದಾರಿಯುತವಾಗಿರಿ: ನಟ ಸೋನು ಸೂದ್ ಟ್ವೀಟ್
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ- ಸಿಎಂ ಮಾನ್: ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆ ವಿಷಾದಕರ. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. ಹೆಣ್ಣುಮಕ್ಕಳು ನಮಗೆಲ್ಲ ಹೆಮ್ಮೆಯ ವಿಷಯ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಜವಾಬ್ದಾರಿಯಿಂದ ವರ್ತಿಸಬೇಕು- ಸೋನು ಸೂದ್: ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆಯ ಬಗ್ಗೆ ನಟ ಸೋನುಸೂದ್ ಪ್ರತಿಕ್ರಿಯಿಸಿ, ಇದು ಅತ್ಯಂತ ದುರದೃಷ್ಟಕರ ಘಟನೆ. ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಿ. ಸಹೋದರಿಯರ ಪರವಾಗಿ ನಿಲ್ಲುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮಹಿಳಾ ಆಯೋಗದಿಂದ ತನಿಖೆ: ಮತ್ತೊಂದೆಡೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಹೇಳಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಪಂಜಾಬ್ ಡಿಜಿಪಿ ಮತ್ತು ಚಂಡೀಗಢ ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಆಯೋಗದಿಂದ ತನಿಖೆ ನಡೆಸಲಾಗುವುದು ಎಂದು ತಿಳಿದ್ದಾರೆ.
ಓದಿ: ಗರ್ಲ್ಸ್ ಹಾಸ್ಟೆಲ್ ವಿಡಿಯೋ ಸೋರಿಕೆ: ಚಂಡಿಗಢ ವಿವಿಯಲ್ಲಿ ಉದ್ವಿಗ್ನ ಪರಿಸ್ಥಿತಿ
ವೈರಲ್ ಯುವತಿಯ ಗೆಳೆಯ ಅರೆಸ್ಟ್: ಮೊಹಾಲಿಯ ಚಂಡೀಗಢ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿದ್ಯಾರ್ಥಿನಿಯ ಆಪಾದಿತ ಗೆಳೆಯನನ್ನು ಶಿಮ್ಲಾದಲ್ಲಿ ಬಂಧಿಸಲಾಗಿದೆ. ಪೊಲೀಸರು ಯುವಕನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕಾಲೇಜಿನ ಮುಂದೆ ವಿದ್ಯಾರ್ಥಿನಿಯರ ಪ್ರತಿಭಟನೆ: ವಿಡಿಯೋ ಲೀಕ್ ಮಾಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ವ್ಯಾಪಿಸಿಕೊಂಡ ಬಳಿಕ ವಿವಿಯ ಎಲ್ಲ ವಿದ್ಯಾರ್ಥಿಗಳು ಕಾಲೇಜು ಆವರಣದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ವೈರಲ್ ಯುವತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.