ಬೋಲಂಗೀರ್ (ಒಡಿಶಾ): ಜಿಲ್ಲೆಯ ಸನಾತಿಕಾ ಗ್ರಾಮದ ಸುರೇಶ್ ನಾಯ್ಕ್ ಎಂಬ ಅಂಧ ವೃದ್ಧ ತಮ್ಮ ಅಸಾಧಾರಣ ಪ್ರತಿಭೆ ಮೂಲಕ ನಡುವೆಯೇ ಮಾದರಿ ರೈತನಾಗುವ ಮೂಲಕ ಎಲ್ಲರಿಗೂ ಉದಾಹರಣೆಯಾಗಿದೆ.
ದೃಷ್ಟಿ ಇಲ್ಲದಿದ್ದರೂ, ಅವರು ಒಡಿಶಾದ ಯಶಸ್ವಿ ರೈತರಲ್ಲಿ ಒಬ್ಬರಾಗಿದ್ದಾರೆ. ಚಿಕ್ಕವಯಸ್ಸಿನಲ್ಲೇ ಅಂಧತ್ವ ಆವರಿಸಿದ್ರೂ ಅವರ ಬಲವಾದ ಇಚ್ಛಾಶಕ್ತಿ ಅವರನ್ನು ಒಬ್ಬ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳಿಸಿದೆ. ನಾಯ್ಕ್ಗೆ ಕೇವಲ ಮೂರು ವರ್ಷ ವಯಸ್ಸಿನವನಾಗಿದ್ದಾಗ ಸಿಡುಬು ರೋಗ ಬಂದು ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಳ್ಳಬೇಕಾಯ್ತು. ಆದಾದ ಬಳಿಕ ಸುತ್ತಲಿನ ವರ್ಣರಂಜಿತ ಪ್ರಪಂಚವು ಅವರಿಗೆ ಸಂಪೂರ್ಣ ಕತ್ತಲೆಯಾಗಿಬಿಟ್ಟಿತು.
ಅಂಧತ್ವದ ಜೊತೆಗೆ ಬಡತನ ಕೂಡ ಅವರ ಭವಿಷ್ಯವನ್ನು ಕತ್ತಲು ಮಾಡಲು ಅಣಿಯಾಗಿತ್ತು. ಆದರೆ ಇದ್ಯಾವುದಕ್ಕೂ ಬಗ್ಗದ ಸುರೇಶ್ ತಮ್ಮ ಎಲ್ಲಾ ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಲೇ ಬೆಳೆಯಲಾರಂಭಿಸಿದ್ರು. ಕ್ರಮೇಣ ತಮ್ಮ ಎರಡು ಎಕರೆ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಆರಂಭಿಸಿದ್ರು. ಕುರುಡನೋರ್ವ ಕೃಷಿ ಮಾಡುವುದು ಅಸಾಧ್ಯವಾದ ಕೆಲಸವಾದರೂ ಅವರು ಆ ಅಸಾಧ್ಯವನ್ನೇ ಸಾಧ್ಯವನ್ನಾಗಿಸಿ, ಅದರಲ್ಲಿ ಯಶಸ್ವಿಯಾಗಿ ಇತರರಿಗೆ ಮಾದರಿಯಾದ್ರು.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು 'ನನ್ನ ಜಮೀನಿರುವ ಸ್ಥಳವನ್ನು ಸರಿಯಾಗಿ ಗುರುತಿಸಲು, ಬಾವಿಯಿಂದ ನೀರನ್ನು ಸೆಳೆಯಲು ಮತ್ತು ನನ್ನ ಜಮೀನಿಗೆ ನೀರು ಹಾಯಿಸುವುದು ಮತ್ತು ಭತ್ತವನ್ನು ಕೊಯ್ಲು ಮಾಡುವಂತಹ ಎಲ್ಲಾ ಕೆಲಸಗಳನ್ನು ಮಾಡಲು ನನಗೆ ಸಾಧ್ಯವಾಗುತ್ತದೆ' ಎಂದು ಹೇಳಿದರು. ನನ್ನ ಕೃಷಿ ಕಾರ್ಯಕ್ಕೆ ಪತ್ನಿಯೂ ಕೈ ಜೋಡಿಸಿದ್ದಾಳೆ. ನಾನು ನನ್ನ ಜಮೀನಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದೇನೆ ಮತ್ತು ನನ್ನ ಕುಟುಂಬದ ಆರ್ಥಿಕ ಹೊರೆಯನ್ನು ನಾನೇ ನಿರ್ವಹಿಸುತ್ತಿದ್ದೇನೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ವೃದ್ಧ.
ಸುರೇಶ್ ನಾಯ್ಕ್ ಕೇವಲ ಯಶಸ್ವಿ ಕೃಷಿಕ ಮಾತ್ರವಲ್ಲ, ಸಂಗೀತಗಾರ, ಗೀತರಚನೆಕಾರ ಮತ್ತು ವಾದ್ಯಸಂಗೀತಗಾರ ಕೂಡ ಹೌದು. ಅದಕ್ಕಾಗಿಯೇ ಇವರನ್ನು ಅವರ ಹಳ್ಳಿಯ ಜನರು ತಮ್ಮ “ಗುರು” (ಶಿಕ್ಷಕ) ಎಂದು ಕರೆಯುತ್ತಾರೆ ಮತ್ತು ಅವರಿಗೆ ಗೌರವ ನೀಡುತ್ತಾರೆ.
ಆರಂಭದಲ್ಲಿ ನಾನು ಬರಾಘರ್ ಜಿಲ್ಲೆಯ ಶಿಕ್ಷಕರಿಂದ ತಂತಿವಾದ್ಯ ನುಡಿಸುವುದನ್ನು ಕಲಿತೆ. ನಂತರ ನಾನು ಮೃದಂಗ, ಪಿಯಾನೋ ಮತ್ತು ಕೊಳಲನ್ನು ಪರಿಪೂರ್ಣವಾಗಿ ನುಡಿಸುವುದನ್ನ ಕಲಿತಿದ್ದೇನೆ. ಅಂತೆಯೇ, ನಾನು ಸಾಹಿತ್ಯವನ್ನು ಬರೆಯುವಲ್ಲಿ ಮತ್ತು ರಾಗ ಸಂಯೋಜನೆ ಮಾಡುವಲ್ಲಿ ಪರಿಣಿತನಾಗುತ್ತೇನೆ ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾರೆ ಈಗಾಗಲೇ ತುಂಬು ಜೀವನ ನಡೆಸಿರುವ ವೃದ್ಧ ಸುರೇಶ್ ನಾಯ್ಕ್.
ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಸುರೇಶ್ ನಾಯ್ಕ್ ನಮ್ಮೆದುರು ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ. ಸಾಧಿಸುವ ಛಲ,ಇಚ್ಛಾಶಕ್ತಿ ಇದ್ದರೆ ನಮ್ಮ ಯಾವ ಕುಂದುಕೊರತೆಗಳು ನಮ್ಮನ್ನು ಹಿಮ್ಮೆಟ್ಟಿಸಲಾರವು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಸುರೇಶ್ ನಾಯಕ್.