ಮುಂಬೈ: ನೇತಾಜಿಯವರ ಜನ್ಮದಿನದಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡುವ ವೇಳೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಕ್ಕೆ ಭಾಷಣ ಮೊಟಕುಗೊಳಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಸೇನೆ ವಕ್ತಾರ, ಸಂಸದ ಸಂಜಯ್ ರಾವತ್, ಜೈ ಶ್ರೀರಾಮ್ ಘೋಷಣೆಗಳ ಬಗ್ಗೆ ಯಾರೂ ಅವಮಾನ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಜೈ ಶ್ರೀರಾಮ್ ಘೋಷಣೆ ರಾಷ್ಟ್ರದ ಜಾತ್ಯಾತೀತತೆ ಮೇಲೆ ಏನೂ ಪರಿಣಾಮ ಬೀರಲ್ಲ. ಮಮತಾ ಜಿ ಕೂಡ ರಾಮನನ್ನು ನಂಬುತ್ತಾರೆ ಎಂದು ನಾನು ನಂಬಿದ್ದೇನೆ ಎಂದರು.
ಜನವರಿ 23 ರಂದು ನೇತಾಜಿ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಸರ್ಕಾರಿ ಕಾರ್ಯಕ್ರಮಕ್ಕೆ ಸ್ವಲ್ಪ ಘನತೆ ಇರಬೇಕು. ಭಾಷಣ ಮಾಡುವ ವೇಳೆ ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿ ಅವಮಾನಿಸುವುದು ಸಮಂಜಸವಲ್ಲ ಎಂದು ಗುಡುಗಿದ್ದರು.
ಘಟನೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಮಮತಾ ಬ್ಯಾನರ್ಜಿ, ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ ಎಂದರು.
ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿದ್ದರು. ಒಂದೇ ವೇದಿಕೆ ಮೇಲೆ ದೀದಿ - ಮೋದಿ ಮುಖಾಮುಖಿಯಾಗಿದ್ದರು. ಈ ವೇಳೆ ಮೊಳಗಿದ ಜೈ ಶ್ರೀರಾಮ್ ಘೋಷಣೆ ಮಮತಾ ಬ್ಯಾನರ್ಜಿಗೆ ಇರಿಸು ಮುರಿಸು ಆಗುವಂತೆ ಮಾಡಿತ್ತು.
ಕೆಲವೇ ತಿಂಗಳುಗಳಲ್ಲಿ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸದ್ಯ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದಲ್ಲಿದೆ. ಅಲ್ಲದೆ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸುವುದಾಗಿ ಘೋಷಿಸಿತ್ತು.