ನವದೆಹಲಿ: ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸಂಸದರಿಗೆ ಯಾವುದೇ ಬಂಧನ ಅಥವಾ ಸಮನ್ಸ್ ನೀಡುವುದರಿಂದ ವಿನಾಯ್ತಿ ಇಲ್ಲ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ನೀಡುವ ಸಮನ್ಸ್ ಹಾಗು ವಿಚಾರಣೆಗಳಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಇಂದು ಸ್ಪಷ್ಟಪಡಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಅಧಿವೇಶನ ನಡೆಯುತ್ತಿದ್ದಾಗ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಇದು ನಿನ್ನೆ ಸಂಸತ್ನಲ್ಲಿ ಕೆಲಹೊತ್ತು ಕೋಲಾಹಲಕ್ಕೂ ಕಾರಣವಾಗಿತ್ತು.
ಕಾನೂನು ಪಾಲಿಸುವ ನಾಗರಿಕರಾಗಿ, ಕಾನೂನು ಮತ್ತು ಕಾನೂನು ಕಾರ್ಯವಿಧಾನವನ್ನು ಗೌರವಿಸುವುದು ನಮ್ಮ ಕರ್ತವ್ಯ. ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ತನಿಖಾ ಸಂಸ್ಥೆಗಳ ಕ್ರಮಗಳಿಂದ ತಮಗೆ ಸವಲತ್ತು ಇದೆ ಎಂಬ ತಪ್ಪು ಕಲ್ಪನೆ ಸಂಸದರಲ್ಲಿದೆ ಎಂದು ಇದೇ ವೇಳೆ ನಾಯ್ಡು ತಿಳಿಸಿದರು.
ಇದನ್ನೂ ಓದಿ: ಅಧಿವೇಶನ ನಡೆಯುತ್ತಿದ್ದಾಗಲೇ ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್: ಸಂಸತ್ನಲ್ಲಿ ವಾಗ್ವಾದ
ಸಂಸತ್ ಸದಸ್ಯರು ಸಾಮಾನ್ಯ ನಾಗರಿಕರಿಗಿಂತಲೂ ಭಿನ್ನ ತಳಹದಿ ಹೊಂದಿಲ್ಲ. ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಲ್ಪಡುವುದರಿಂದ ಯಾವುದೇ ವಿನಾಯಿತಿಯೂ ಅವರಿಗಿಲ್ಲ. ಅಧಿವೇಶನ ಅಥವಾ ಸದನ ಸಮಿತಿ ಸಭೆ ಪ್ರಾರಂಭವಾಗುವ 40 ದಿನಗಳ ಮೊದಲು ಮತ್ತು ಅದರ ನಂತರ 40 ದಿನಗಳ ಕಾಲ ಸಿವಿಲ್ ಪ್ರಕರಣದಲ್ಲಿ ಸಂಸತ್ ಸದಸ್ಯರನ್ನು ಬಂಧಿಸಲಾಗುವುದಿಲ್ಲ ಎಂಬ ಮಾಹಿತಿ ಸಂಸದರಿಗಿದೆ. ಆದಾಗ್ಯೂ, ಕ್ರಿಮಿನಲ್ ಪ್ರಕರಣಗಳಲ್ಲಿ ಸಂಸತ್ ಸದಸ್ಯರು ಸಾಮಾನ್ಯ ನಾಗರಿಕರಿಗಿಂತ ಯಾವುದೇ ವಿಶೇಷ ಸೌಲಭ್ಯ ಹೊಂದಿರುವುದಿಲ್ಲ ಎಂದು ಹೇಳಿದರು.