ಭರತಪುರ(ರಾಜಸ್ಥಾನ): ಮಹಿಳೆಯರ ಸುರಕ್ಷತೆ ವಿಚಾರ ರಾಜಸ್ಥಾನದಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಜೈಪುರದಲ್ಲಿ ಬಿಜೆಪಿಯ ಮಾಜಿ ಶಾಸಕಿ ಅಮೃತ ಮೇಘವಾಲ್ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ನಡೆದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಭರತಪುರದ ಬಿಜೆಪಿ ಸಂಸದೆ ರಂಜಿತಾ ಕೋಲಿ ಅವರ ನಿವಾಸದ ಮೇಲೆ ಮಂಗಳವಾರ ಮಧ್ಯರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಭರತಪುರದ ಬಯಾನಾ ಪ್ರದೇಶದಲ್ಲಿರುವ ರಂಜಿತಾ ಕೋಲಿ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ದಾಳಿಯ ವೇಳೆ ರಂಜಿತಾ ಕೋಲಿ ಮೂರ್ಛೆ ಹೋಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ಬಯಾನಾದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.
ನೀವು ಅದೇ ಸ್ಥಾನದಲ್ಲಿ ಉಳಿಯಲು ಬಯಸುವುದಾದರೆ, ಮುಂದಿನ ಬಾರಿ ನಿಮ್ಮ ಮೇಲೆ ಗುಂಡು ಹಾರಿಸಲಾಗುತ್ತದೆ. ನಿಮ್ಮನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದೆಯ ಮನೆ ಬಾಗಿಲಿಗೆ ಪತ್ರವೊಂದನ್ನು ಅಂಟಿಸಿ, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸಂಸದೆ ರಂಜಿತಾ ಕೋಲಿ ಅವರ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಮೇ 27ರಂದು ಕೂಡಾ ಸಂಸದರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಇದಾದ ನಂತರ ಮತ್ತೊಬ್ಬ ದುಷ್ಕರ್ಮಿ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ: ಮೈಸೂರಿನಲ್ಲಿ ಕ್ಲೋರಿನ್ ಅನಿಲ ಸೋರಿಕೆ: ಅವಘಡ ತಪ್ಪಿಸಲು ಬಂದ ಅಗ್ನಿಶಾಮಕ ದಳದ 6 ಸಿಬ್ಬಂದಿ ಅಸ್ವಸ್ಥ