ನವ ದೆಹಲಿ: ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಗಿರಿಧಾಮಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಗುಂಪಾಗಿ ಸೇರುತ್ತಿರುವುದು ಆತಂಕದ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈಶಾನ್ಯ ಭಾಗದ 8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಇಂದು ವಿಡಿಯೋ ಸಂವಾದ ನಡೆಸಿದ ಪ್ರಧಾನಿ, ಮಹಾಮಾರಿ ಕೋವಿಡ್ 3ನೇ ಅಲೆ ವಿರುದ್ಧದ ಹೋರಾಟಕ್ಕೆ ನಿರಂತರವಾಗಿ ಲಸಿಕಾ ಅಭಿಯಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.
3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯಲ್ಲಿ ರಾಜಿಯಾಗಬೇಡಿ. ವೈರಸ್‌ನಿಂದಾಗಿ ಪ್ರವಾಸೋದ್ಯಮ ಹಾಗೂ ಉದ್ಯಮದ ಮೇಲೆ ಪರಿಣಾಮ ಬೀರಿರುವುದು ಸತ್ಯ. ಆದರೆ ಗಿರಿಧಾಮಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಗುಂಪು ಸೇರುವುದು ಸರಿಯಾದ ಕ್ರಮವಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಕೊರೊನಾ ಹೊಸ ಅಲೆಯನ್ನು ತಡೆಯಲು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕೋವಿಡ್‌ನ ರೂಪಾಂತರಿಗಳ ಮೇಲೆ ಕಣ್ಣಿಡುವ ಅಗತ್ಯವಿದೆ. ರೂಪಾಂತರಿಯಿಂದ ಎಷ್ಟು ತೊಂದರೆಗೊಳಗಾಗಬಹುದು ಎಂದು ತಜ್ಞರು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅಂತಹ ಕ್ರಿಯಾತ್ಮಕ ಪರಿಸ್ಥಿತಿಯಲ್ಲಿ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯು ಬಹಳ ಮುಖ್ಯ. ಕೊರೊನಾ ಪರೀಕ್ಷೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯಗಳ ಸುಧಾರಣೆ ಮೂಲಕ ನಾವು ಮುಂದುವರಿಯಬೇಕಾಗಿದೆ. ಇದಕ್ಕಾಗಿ ಇತ್ತೀಚೆಗೆ ಸಚಿವ ಸಂಪುಟದಲ್ಲಿ 23,000 ಕೋಟಿ ರೂ.ಗಳ ಹೊಸ ಪ್ಯಾಕೇಜ್ ಘೋಷಿಸಲಾಗಿದೆ. ಈಶಾನ್ಯದ ಪ್ರತಿಯೊಂದು ರಾಜ್ಯವು ಈ ಪ್ಯಾಕೇಜ್‌ನಿಂದ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಸಹಾಯ ಪಡೆಯಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಸ್ಸೋಂ, ನಾಗಲ್ಯಾಂಡ್, ತ್ರಿಪುರಾ, ಸಿಕ್ಕಿಂ, ಮಣಿಪುರ್ ಮೇಘಾಲಯ, ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮನ್ಸುಖ್ ಮಾಂಡೊವಿಯಾ ಹಾಗೂ ಇತರರು ಉಪಸ್ಥಿತರಿದ್ದರು.
ಅನ್‌ಲಾಕ್ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿ ನಗರದಲ್ಲಿ ಕೋವಿಡ್ ನಿಮಯಗಳನ್ನು ಗಾಳಿಗೆ ಸಾವಿರಾರು ಪ್ರವಾಸಿಗರು ಗುಂಪು ಸೇರಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ರಾಜ್ಯಗಳ ಸಿಎಂಗಳೊಂದಿಗೂ ಪ್ರಧಾನಿ ಸಭೆ
ದೇಶದಲ್ಲಿನ ಕೋವಿಡ್ ಪರಿಸ್ಥಿತಿಯ ಸಂಬಂಧ ಮೋದಿ, ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೂ ವರ್ಚುವಲ್ ಸಭೆ ನಡೆಸಿ, ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಹಾಗೂ ಒಡಿಶಾ ರಾಜ್ಯಗಳ ಸಿಎಂಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.