ರತ್ಲಾಮ್/ಮಂದಸೌರ್ (ಮಧ್ಯಪ್ರದೇಶ): ಯುವಕ, ಯುವತಿಯರ ಪ್ರೀತಿ- ಪ್ರೇಮ, ಹಕ್ಕುಗಳು, ಉತ್ತಮ ಶಿಕ್ಷಣ, ಉದ್ಯೋಗ ಈ ಎಲ್ಲ ಮೌಲ್ಯಗಳು ಇಲ್ಲಿ ಅಪ್ರಸ್ತುತ. ಮಗು ಗರ್ಭದಲ್ಲಿದ್ದಾಗಲೇ ಆಕೆ ಯಾರ ಜೊತೆಗೆ ವಿವಾಹವಾಗಬೇಕು ಎಂಬುದು ನಿರ್ಧಾರವಾಗುತ್ತದೆ. ಬಯಲಲ್ಲಿ ನಸುನಗುತ್ತಾ ಆಡುವ ಪುಟ್ಟ ಕಂದಮ್ಮನಿಗೂ ಗೊತ್ತು ತಾನು ಇಂಥವನನ್ನೇ ಮುಂದೆ ಕೈ ಹಿಡಿಯಬೇಕು ಎಂಬುದು. ಇಷ್ಟವಿದ್ದರೂ, ಇಲ್ಲದೇ ಇದ್ದರೂ ಯಾವುದೇ ಮಾರ್ಪಾಡಿಗೆ ಇಲ್ಲಿ ಅವಕಾಶವೇ ಇಲ್ಲ.!
ಇಷ್ಟೆಲ್ಲ ಸಂಕೋಲೆಗಳು ಇರುವುದು ಮಧ್ಯಪ್ರದೇಶದ ರತ್ಲಾಮ್- ಮಂದಸೌರ್ ಹೆದ್ದಾರಿ ಪಕ್ಕದಲ್ಲಿರುವ ಮನನ್ಖೇಡ ಗ್ರಾಮದಲ್ಲಿ. ಇಲ್ಲಿ ವಾಸಿಸುತ್ತಿರುವ ಬಾಚ್ಡಾ ಸಮುದಾಯ ಸಹಜ ಸಮಾಜದಿಂದ ದೂರವಿದೆ. ಇಲ್ಲಿಯ ಕಾನೂನು- ಕಟ್ಟಳೆಗಳೇ ಬೇರೆ. ಅವರೇ ಮಾಡಿಕೊಂಡ ರೀತಿ- ರಿವಾಜುಗಳಿಗೆ ಅವರು ದಾಸರು. ಇಲ್ಲಿ ಸರಿ- ತಪ್ಪುಗಳಿಗೆ ಬೆಲೆ ಇಲ್ಲ. ಹೆಣ್ಣಿಗೆ ಯಾವುದೇ ಹಕ್ಕಿಲ್ಲ. ವೈಯಕ್ತಿಕ ಸ್ವಾತಂತ್ರ್ಯ ಮೊದಲೇ ಇಲ್ಲ. ಬದುಕು ಇಲ್ಲಿ ಕಟು ಯಾಂತ್ರಿಕ.
ವೇಶ್ಯಾವಾಟಿಕೆಯೇ ಇವರ ಜೀವನೋಪಾಯವಾಗಿದೆ. ಹೆಣ್ಣು ತಾನಾಗಿಯೇ ಇಚ್ಚಿಸಿ ಗರ್ಭ ಧರಿಸುವ ಹಕ್ಕಿಲ್ಲ. ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗುವ ಅವಕಾಶವೇ ಇಲ್ಲಿಲ್ಲ. ಹುಟ್ಟಿದ ಅಥವಾ ಗರ್ಭದಲ್ಲಿದ್ದಾಗಲೇ ಪೋಷಕರು ಆಕೆಗೆ ಒಬ್ಬ ಗಂಡನ್ನು ಸೂಚಿಸುತ್ತಾರೆ. ಆಕೆ ಬೆಳೆದು 17 ವರ್ಷ ತುಂಬಿದ ಬಳಿಕ ಆತನೊಂದಿಗೇ ವಿವಾಹವಾಗಬೇಕು. ವಯಸ್ಸಿನ ಅಂತರ ಕಡಿಮೆಯೂ ಇರಬಹುದು, ಹೆಚ್ಚೂ ಇರಬಹುದು. ನಿಯಮಗಳೆಲ್ಲ ಇಲ್ಲಿ ತೀರಾ ಗೌಣ.
5 ವರ್ಷದ ಗಂಡಿನೊಂದಿಗೆ 7 ವರ್ಷದ ಬಾಲಕಿಗೆ ಮದುವೆ : ಈಟಿವಿ ಭಾರತ್ ಗ್ರೌಂಡ್ ರಿಪೋರ್ಟ್ ನಡೆಸಿದಾಗ, ಈ ಎಲ್ಲ ಕಹಿ ಸತ್ಯಗಳು ಹೊರಬಂದಿವೆ. ಮಕ್ಕಳೊಂದಿಗೆ ಆಟವಾಡುತ್ತಿದ್ದ 7 ವರ್ಷ ಅನನ್ಯಾ ಎಂಬ ಬಾಲಕಿಗೆ 5 ವರ್ಷದ ಪರಿ ಎಂಬ ಬಾಲಕನೊಂದಿಗೆ ಮದುವೆ ಫಿಕ್ಸ್ ಮಾಡಲಾಗಿದೆ. ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಆಕೆಗೆ ವಿರೋಧಿಸುವ ಯಾವುದೇ ಅವಕಾಶವಿಲ್ಲ.
ರತ್ಲಾಮ್- ಮಂದಸೌರ್‌ನ ಹೆದ್ದಾರಿಯ ಬದಿಗಳಲ್ಲಿ ಬೀಡು ಬಿಟ್ಟಿರುವ ಈ ಬಾಚ್ಡಾ ಸಮಾಜ ಇತರರ ಮನೆಗಳನ್ನು ಕಂಡು ಆಶ್ಚರ್ಯಪಡುತ್ತಾರೆ. ಹೆದ್ದಾರಿಯಲ್ಲಿ ಓಡಾಡುವ ವಾಹನಗಳೂ ಇವರಿಗೆ ಅಚ್ಚರಿಯ ಸಂಗತಿ. ಆಟವಾಡುತ್ತಾ ಬೆಳೆಯುವ 5-6 ವರ್ಷದ ಮಕ್ಕಳಿಗೆ ತಮಗೆ ಈಗಾಗಲೇ ವಿವಾಹ ಬಂಧನ ನಿರ್ಧಾರವಾಗಿದೆ ಎಂಬುದು ಅವರಿಗೆ ವಿಧಿತ. ದೇಶದ ಯಾವುದೇ ಕಾನೂನು ಕಟ್ಟಳೆಗಳಿಗೂ ಇವರಿಗೂ ಸಂಬಂಧವೇ ಇಲ್ಲ ಎಂಬಂತಿದೆ. ರತ್ಲಾಮ್‌ನ ಕೊನೆಯಲ್ಲಿರುವ ಮನನ್ಖೇಡ ಗ್ರಾಮದಲ್ಲಿ ಸುಮಾರು 1800 ಮನೆಗಳಿವೆ. ಬಾಜ್ಡಾ ಸಮುದಾಯದ ಹಲವು ಶಿಬಿರಗಳು ಇವೆ. ಹೆದ್ದಾರಿಯ ಅಕ್ಕಪಕ್ಕದ ಮನೆಗಳೆಲ್ಲ ಅವರದ್ದೇ.
ನಮ್ಮ ಮದುವೆ ಮೊದಲೇ ನಿರ್ಧಾರ: ಈಟಿವಿ ಭಾರತ್ ಜೊತೆ ಮಾತನಾಡಿದ ಮಹಿಳೆಯೊಬ್ಬರು, "ವೇಶ್ಯಾವಾಟಿಕೆ ನಡೆಸಿದರೂ ನಾವು ಮುಂದೆ ಮದುವೆಯಾಗುತ್ತೇವೆ. ಎಲ್ಲರೂ ಒಂದಾಗಿ ಇರಬೇಕು ಎಂಬುದು ಇದರ ಹಿಂದಿನ ಉದ್ದೇಶ. ಹುಡುಗಿಯರ ಸಂಬಂಧವನ್ನು ಮುಂಚಿತವಾಗಿ ನಿರ್ಧರಿಸಲಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗ ಅಥವಾ ಕೆಲವೊಮ್ಮೆ ಗರ್ಭದಲ್ಲಿದ್ದಾಗಲೇ ಇಂಥವರೊಂದಿಗೆ ಮದುವೆ ಆಗಬೇಕು ಎಂದು ಷರಾ ಬರೆಯಲಾಗುತ್ತದೆ. ಮಕ್ಕಳು ಶಾಲೆಗೆ ಹೋದರೂ, ಬಳಿಕ ಅವರಿಗೆ 17 ನೇ ವಯಸ್ಸಿಗೆ ಮದುವೆ ಮಾಡಲಾಗುತ್ತದೆ" ಎಂದು ಹೇಳಿದರು.
ಕ್ಯಾಮರಾ ಕಂಡೊಡನೆ ಇಲ್ಲಿಯ ಮಹಿಳೆಯರು ಮರೆಯಾಗುತ್ತಾರೆ. 17 ವರ್ಷದ ಬಾಲಕಿಯನ್ನು ಮಾತನಾಡಿಸಿದಾಗ ಆಕೆ ತನಗೆ ಈಗಾಗಲೇ ವಿವಾಹವಾಗಿದೆ ಎಂದು ತಿಳಿಸಿದಳು. ಓದು ಮುಂದುವರಿಸಲು ಸಲಹೆ ನೀಡಿದಾಗ, ಜೀವನ ಪೊರೆಯುವುದೇ ಕಷ್ಟ. ಓದು ಎಲ್ಲಿಂದ. ನನ್ನಂಥ ಅದೆಷ್ಟೋ ಹುಡುಗಿಯರ ಕಥೆಯೂ ಇದೆ ಎಂದು ಅವರು ಆಕೆ ತಿಳಿಸಿದಳು. ರತ್ಲಾಮ್ ಜಿಲ್ಲೆಯ ಪಿಪಾಲಿಯಾ ಜೋಡಾ, ದೊಂಡಾರ್, ಪರ್ವಲಿಯಾ, ಮಂದಸೌರ್‌ನ ಗುಜ್ಜರ್ ವರ್ದಿಯಾದವರೆಗೆ ನಿರ್ಜನ ಹಳ್ಳಿಯ ಸುತ್ತಲೂ ಈ ಸಮುದಾಯ ಹರಡಿಕೊಂಡಿದೆ.
ಇದನ್ನೂ ಓದಿ: 'ಯೇ ದೋಸ್ತಿ ಹಮ್ ನಹೀ ತೋಡೆಂಗೆ..': ಶೋಲೆ ಸಿನಿಮಾದ ಹಿಂದಿ ಗೀತೆ ಹಾಡಿ ಪ್ರಧಾನಿ ಮೋದಿ ಸ್ವಾಗತಿಸಿದ ಈಜಿಪ್ಟ್ ಯುವತಿ!- ನೋಡಿ