ಮಾಧೇಪುರ(ಬಿಹಾರ): ಕೋವಿಡ್ ಮಹಾಮಾರಿಗೆ ಎರಡು ಡೋಸ್ ಕೊರೊನಾ ವ್ಯಾಕ್ಸಿನ್ ನೀಡಲಾಗ್ತಿದೆ. 15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಚುಚ್ಚುಮದ್ದು ಪಡೆದುಕೊಳ್ಳುವುದು ಒಳಿತು.
ಆದರೆ, ಬಿಹಾರದಲ್ಲಿ ವಾಸವಾಗಿರುವ 84 ವರ್ಷದ ವೃದ್ಧರೊಬ್ಬರು 11 ಸಲ ವ್ಯಾಕ್ಸಿನ್ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಬಿಹಾರದ ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ನ ಓರೈ ಗ್ರಾಮದಲ್ಲಿ ವಾಸವಾಗಿರುವ ಬ್ರಹ್ಮದೇವ್ ಮಂಡಲ್ 11 ಸಲ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಇದರಿಂದ ತಮಗೆ ಸಾಕಷ್ಟು ಲಾಭವಾಗಿದೆ ಎಂದು ಹೇಳುವ ಅವರು, ಇದೇ ಕಾರಣಕ್ಕಾಗಿ ಇಷ್ಟೊಂದು ಸಲ ವ್ಯಾಕ್ಸಿನ್ ಪಡೆದುಕೊಂಡೆ ಎನ್ನುತ್ತಾರೆ.
ಬ್ರಹ್ಮದೇವ್ ಅವರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸದ್ಯ ಓರೈ ಗ್ರಾಮದಲ್ಲಿ ವಾಸವಿದ್ದಾರೆ. ಕಳೆದ ಫೆಬ್ರವರಿ 13ರಂದು ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿರುವ ಇವರು ತದನಂತರ ಡಿಸೆಂಬರ್ 30ರವರೆಗೆ ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು 11 ಸಲ ವ್ಯಾಕ್ಸಿನ್ ಡೋಸ್ ಪಡೆದುಕೊಂಡಿದ್ದಾರೆ. ಪ್ರತಿ ಸಲ ವ್ಯಾಕ್ಸಿನ್ ಪಡೆದುಕೊಂಡಿರುವ ದಿನಾಂಕವನ್ನು ಕಾಗದದಲ್ಲಿ ಬರೆದಿಟ್ಟಿದ್ದಾರೆ. ವಿಶೇಷವೆಂದರೆ, 12ನೇ ಸಲ ವ್ಯಾಕ್ಸಿನ್ ಪಡೆದುಕೊಳ್ಳಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಜಾರ್ಖಂಡ್ ಬಿಜೆಪಿ ಮಾಜಿ ಶಾಸಕನ ಮೇಲೆ ನಕ್ಸಲ್ ದಾಳಿ: ಇಬ್ಬರು ಅಂಗರಕ್ಷಕರ ಹತ್ಯೆ
ವೃದ್ಧ ವ್ಯಾಕ್ಸಿನ್ ಪಡೆದ ದಿನಾಂಕ ಹೀಗಿದೆ..
- ಫೆಬ್ರವರಿ 13ರಂದು ಮೊದಲ ಡೋಸ್
- ಮಾರ್ಚ್ 13ರಂದು ಎರಡನೇ ಡೋಸ್
- ಮೇ 19ರಂದು ಮೂರನೇ ಡೋಸ್
- ಜೂನ್ 16ರಂದು ನಾಲ್ಕನೇ ಡೋಸ್
- ಜುಲೈ 24ರಂದು ಐದನೇ ಡೋಸ್
- ಆಗಸ್ಟ್ 31ರಂದು ಆರನೇ ಡೋಸ್
- ಸೆಪ್ಟೆಂಬರ್ 11ರಂದು ಏಳನೇ ಡೋಸ್
- ಸೆಪ್ಟೆಂಬರ್ 22ರಂದು ಎಂಟನೇ ಡೋಸ್
- ಸೆಪ್ಟೆಂಬರ್ 24ರಂದು ಒಂಬತ್ತನೇ ಡೋಸ್
- ಇದರ ಬೆನ್ನಲ್ಲೇ 10 ಹಾಗೂ 11ನೇ ಡೋಸ್.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಹ್ಮದೇವ್, 'ಇಲ್ಲಿಯವರೆಗೆ 11 ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದು, ನನಗೆ ಹತ್ತಾರು ಲಾಭಗಳಾಗಿವೆ. ಬೆನ್ನು ನೋವು ಸಂಪೂರ್ಣವಾಗಿ ವಾಸಿಯಾಗಿದೆ. ಶೀತ, ಕೆಮ್ಮು ಕೂಡ ಶಮನವಾಗಿದೆ' ಎನ್ನುತ್ತಾರೆ.
ಲಸಿಕೆ ಪಡೆದಿದ್ದು ಹೇಗೆ?
ಈ ವಿಶೇಷ ಪ್ರಕರಣ ಆರೋಗ್ಯ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಒಬ್ಬ ವ್ಯಕ್ತಿ 11 ಸಲ ಲಸಿಕೆ ಪಡೆದುಕೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಉದ್ಭವವಾಗಿದೆ. ಇದರ ತನಿಖೆ ನಡೆಸಿದಾಗ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಮೂಲಕ 8 ಸಲ ವ್ಯಾಕ್ಸಿನ್ ಪಡೆದುಕೊಂಡಿದ್ದು, ವೋಟರ್ ಐಡಿ ಹಾಗೂ ಪತ್ನಿಯ ಮೊಬೈಲ್ ಸಂಖ್ಯೆಯಿಂದ 3 ಸಲ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು ಗೊತ್ತಾಗಿದೆ.
ತನಿಖೆಗೆ ಆದೇಶ:
ಆರೋಗ್ಯ ಇಲಾಖೆಯ ಎಡವಟ್ಟು ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದ್ದು, ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ವೈದ್ಯಾಧಿಕಾರಿ ಆದೇಶ ನೀಡಿದ್ದಾರೆ.