ಹೈದರಾಬಾದ್: ಹಂದಿ ಕೊಬ್ಬಿನಿಂದ ಎಣ್ಣೆ ತಯಾರಿಸಿ ಫಾಸ್ಟ್‌ಫುಡ್ ಕೇಂದ್ರಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಲ್ಕಾಜಿಗಿರಿ ಎಸ್‌ಒಟಿ (ಸ್ಪೆಷಲ್ ಆಪರೇಷನ್ ಟೀಂ) ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ರಾಮುಲು ಅವರು ನೀಡಿದ ಮಾಹಿತಿ ಪ್ರಕಾರ, ನೇರಡ್‌ಮೆಟ್ ವ್ಯಾಪ್ತಿಯ ಆರ್.ಕೆ. ಪುರಂ ನಿವಾಸಿ ರಮೇಶ್ ಶಿವ (24) ಎಂಬಾತ ಹಲವು ವರ್ಷಗಳಿಂದ ತನ್ನ ನಿವಾಸದಲ್ಲಿ ಹಂದಿ ಕೊಬ್ಬಿನಿಂದ ಎಣ್ಣೆ ತಯಾರಿಸುತ್ತಿದ್ದಾನೆ. ಹಂದಿಮಾಂಸ ಮಾರಾಟಗಾರರಿಂದ ಹಂದಿ ಕೊಬ್ಬನ್ನು ಸಂಗ್ರಹಿಸಿ, ಅದನ್ನು ಬಿಸಿ ಮಾಡುತ್ತಾನೆ. ವಿವಿಧ ರಾಸಾಯನಿಕಗಳನ್ನು ಸೇರಿಸುತ್ತಾನೆ. ಹೀಗೆ ತಯಾರಿಸಿದ ಎಣ್ಣೆಯನ್ನು ರಸ್ತೆ ಬದಿಯ ಫ್ರೈಡ್‌ರೈಸ್ ಸ್ಟಾಲ್ಗಳಿಗೆ ಕಡಿಮೆ ಬೆಲೆಗೆ ಮಾರುತ್ತಾನೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯ ನಿವಾಸದಲ್ಲಿ ಬುಧವಾರ ಶೋಧ ನಡೆಸಿದ್ದು, ಹಂದಿ ಕೊಬ್ಬಿನಿಂದ ಎಣ್ಣೆ ತಯಾರಿಸುತ್ತಿದ್ದುದು ಬೆಳಕಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ನೇರಡ್ಮೆಟ್ ಪೊಲೀಸರಿಗೆ ಒಪ್ಪಿಸಲಾಗಿದೆ. ಹಂದಿ ಎಣ್ಣೆ ಖರೀದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ಯಾಕೇಟ್‌ನಲ್ಲಿ ಅಡುಗೆ ಎಣ್ಣೆ ಬದಲು ನೀರು: ಇನ್ನೊಂದೆಡೆ, (ಜೂನ್ 13-2023ರ ಪ್ರಕರಣ) ಗದಗದಲ್ಲಿ ಅಡುಗೆ ಎಣ್ಣೆ ಬದಲಿಗೆ ಪ್ಯಾಕೇಟ್‌ನಲ್ಲಿ ನೀರು ತುಂಬಿ ಗ್ರಾಹಕರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಅಡುಗೆ ಎಣ್ಣೆ ಕಂಪನಿಯವರು ಎಣ್ಣೆ ಬದಲು ನೀರು ತುಂಬಿ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ನಗರದ ಕಿರಾಣಿ ಅಂಗಡಿಯಲ್ಲಿ ಗ್ರಾಹಕರೊಬ್ಬರು ಎಣ್ಣೆ ಖರೀದಿ ಮಾಡಿ ಬಳಿಕ ಮನೆಗೆ ಹೋಗಿ ನೋಡಿದಾಗ ಅದರಲ್ಲಿ ಎಣ್ಣೆ ಬದಲು ನೀರು ತುಂಬಿತ್ತು. ಅವರು ಮರಳಿ ಬಂದು ಅಂಗಡಿ ಮಾಲೀಕರಿಗೆ ತಿಳಿಸಿದಾಗ ಮತ್ತೊಂದು ಪ್ಯಾಕೇಟ್ ಹರಿದು ನೋಡಿದ್ದಾರೆ. ಅದರಲ್ಲೂ ನೀರು ತುಂಬಿರುವುದು ಕಂಡು ಬಂದಿದೆ. ಇದರಿಂದ ಗ್ರಾಹಕನೊಂದಿಗೆ ಅಂಗಡಿ ಮಾಲೀಕನೂ ಕಂಗಾಲಾಗಿದ್ದ.
ಸಿಂಘಾನಿಯ ಕಾರ್ಖಾನೆ ಸೀಜ್: ಇನ್ನೊಂದೆಡೆ, ರಾಜಸ್ಥಾನದ ಕಿಶನ್‌ಗರ್ ಬಾಸ್ ಪ್ರದೇಶದಲ್ಲಿರುವ ಖೈರ್ಥಾಲ್‌ನಲ್ಲಿ ಕಲಬೆರಕೆ ಆರೋಪದ ಹಿನ್ನೆಲೆಯಲ್ಲಿ ಬಾಬಾ ರಾಮ್‌ದೇವ್ ಅವರ ಪತಂಜಲಿ ಬ್ರ್ಯಾಂಡ್ ಹೆಸರಿನಲ್ಲಿ ಸಾಸಿವೆ ಎಣ್ಣೆಯನ್ನು ಪ್ಯಾಕ್ ಮಾಡುವ ಸಿಂಘಾನಿಯಾ ತೈಲ ಕಾರ್ಖಾನೆಯ ಮೇಲೆ (ಮೇ 28-2021)ರಂದು ದಾಳಿ ನಡೆಸಲಾಗಿತ್ತು. ಅಂದು ಜಿಲ್ಲಾಡಳಿತವು ಖೈರ್ಥಾಲ್‌ನ ಇಸ್ಮಾಯಿಲ್‌ಪುರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಸಿಂಘಾನಿಯಾ ಆಯಿಲ್ ಮಿಲ್ ಮೇಲೆ ದಾಳಿ ನಡೆಸಿ ಪತಂಜಲಿಯ ಹೆಸರಿನಲ್ಲಿ ಕಲಬೆರಕೆ ಸಾಸಿವೆ ಎಣ್ಣೆಯನ್ನು ಪೂರೈಸಿದ ಆರೋಪದ ಮೇಲೆ ಸೀಜ್ ಮಾಡಿತ್ತು.
ಪತಂಜಲಿಯ ಅಪಾರ ಪ್ರಮಾಣದ ಪ್ಯಾಕಿಂಗ್ ವಸ್ತುಗಳನ್ನು ಕಾರ್ಖಾನೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಖೈರ್ಥಾಲ್‌ನಿಂದ ಹೆಚ್ಚಿನ ಪ್ರಮಾಣದ ಸಾಸಿವೆ ಎಣ್ಣೆ ಈ ಕಾರ್ಖಾನೆಯಿಂದ ಬಾಬಾ ರಾಮ್‌ದೇವ್ ಅವರ ಕಂಪನಿ ಪತಂಜಲಿಗೆ ಹೋಗುತ್ತದೆ ಎಂದು ಹೇಳಲಾಗುತ್ತಿತ್ತು. ಈ ದೂರಿನ ಆಧಾರದ ಮೇಲೆ ಡಿಸಿ ನನ್ನುಮಾಲ್ ಪಹಾದಿಯಾ ಶೀಘ್ರ ಕ್ರಮ ಕೈಗೊಂಡು ಈ ಕುರಿತು ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದರು.
ಇದನ್ನೂ ಓದಿ: ಪತಂಜಲಿಯ ಸಾಸಿವೆ ಎಣ್ಣೆಯಲ್ಲಿ ಕಲಬೆರಕೆ ಆರೋಪ : ಸಿಂಘಾನಿಯಾ ಕಾರ್ಖಾನೆ ಸೀಜ್